ಸಾರಾಂಶ
ಮುಂಡಗೋಡ: ಮಕ್ಕಳು ಚೆನ್ನಾಗಿ ಬೆಳೆಯಬೇಕೆಂದರೆ ಗರ್ಭಿಣಿ, ಬಾಣಂತಿಯರ ಆರೈಕೆ ಹಾಗೂ ಅವರಿಗೆ ಉತ್ತಮ ಪೌಷ್ಟಿಕ ಆಹಾರ ಬಹಳ ಮುಖ್ಯ ಎಂದು ತಾಲೂಕು ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿಗಳು ಡಾ. ಸ್ವರೂಪರಾಣಿ ಪಾಟೀಲ ತಿಳಿಸಿದರು.ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ನಡೆದ ಗರ್ಭಿಣಿ, ಬಾಣಂತಿಯರಿಗೆ ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆ ಕುರಿತು ತರಬೇತಿ ಮತ್ತು ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೧೮ ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮದುವೆ ಮಾಡಬಾರದು. ಗರ್ಭಕೊಶದ ಬೆಳವಣಿಗೆ ಆಗದೆ ಇರುವುದರಿಂದ ಅವರಿಗೆ ಹೆರಿಗೆ ಸಮಯದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಹಾಗೂ ಜನಿಸುವ ಮಕ್ಕಳ ಬೆಳವಣಿಗೆಯಲ್ಲಿಯೂ ಕುಂಠಿತವಾಗುತ್ತದೆ ಎಂದರು. ಮುಂಡಗೋಡ ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗರ್ಭಿಣಿ, ಬಾಣಂತಿಯರಿಗೆ ನಿರಂತರವಾಗಿ ಆರೈಕೆ ಪೋಷಣೆ ಬಹಳ ಮುಖ್ಯ ಎಂದರು.ಮುಂಡಗೋಡ ಜ್ಯೋತಿ ಆರೋಗ್ಯ ಕೇಂದ್ರ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಗ್ಲ್ಯಾಡಿಸ್ ಮೆನೆಜಸ್, ಡಾ. ಸಿಲ್ವಿಯಾ ಮಾತನಾಡಿದರು.
ತಮ್ಯಾನಕೊಪ್ಪದ ಆಶಾ ಕಾರ್ಯಕರ್ತೆ ಅನಿತಾ ಜಾಧವ, ಸುಸ್ಥಿರ ಅಭಿವೃದ್ಧಿ ಯೋಜನೆ ಫಲಾನುಭವಿ ಚೈತ್ರಾ ರಾಠೋಡ ಮುಂಡಗೋಡದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಪರಸಣ್ಣನವರ, ೬೫ ಜನ ಗರ್ಭಿಣಿ, ಬಾಣಂತಿಯರು ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಮಂಗಳಾ ಮೋರೆ ನಿರೂಪಿಸಿದರು. ಶ್ರೀದೇವಿ ಭದ್ರಾಪುರ ಸ್ವಾಗತಿಸಿದರು. ತೇಜಸ್ವಿನಿ ಬೇಗೂರು ವಂದಿಸಿದರು.