ಸಾರಾಂಶ
ಬಳ್ಳಾರಿ: ಆರೋಗ್ಯವಂತ ಯುವ ನಾಡನ್ನು ರೂಪಿಸಬೇಕೆಂದರೆ ಮಕ್ಕಳ ಆರೋಗ್ಯವನ್ನು ಸದೃಢಗೊಳಿಸಬೇಕು ಎಂದು ಬಳ್ಳಾರಿ ಪೂರ್ವ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಲಕ್ಷ್ಮೀದೇವಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಪಂ ಪೋಷಣ್ ವಿಭಾಗದಿಂದ ಕೆ.ಎಂ.ಇ.ಆರ್.ಸಿ. ಇಲಾಖೆಯ ಸಿಇಪಿಎಂಐಜೆಡ್ ಯೋಜನೆಯಡಿ ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಬಾಲಕಿಯರ)ಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನ್ಯತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಮತ್ತು ಎಎನ್‌ಎಎಫ್ ಯೋಜನೆಯ ಜೊತೆಗೆ ಶಾಲಾವಧಿಯ ನಂತರ ಮಕ್ಕಳಿಗೆ ವಿವಿಧ ಬಗೆಯ ಪೌಷ್ಟಿಕ ಕಾಳು ಹಾಗೂ ಹಣ್ಣನ್ನು ವಿತರಿಸಲಾಗುತ್ತದೆ ಎಂದರು.
ಪೋಷಕರು ಸಹ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಕುರುಕಲು ತಿಂಡಿಗಳು, ಮೈದಾ ಪದಾರ್ಥಗಳನ್ನು ನೀಡದೆ ಗುಣಮಟ್ಟದ ಆಹಾರ ನೀಡಬೇಕು. ಇದರಿಂದ ಮಗುವಿನ ಆರೋಗ್ಯ ಸದೃಢಗೊಳ್ಳುವುದರ ಜೊತೆಗೆ ಸರ್ವಾಂಗೀಣ ಪ್ರಗತಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ಜಿಪಂ ಪೋಷಣ್ ವಿಭಾಗದ ಶಿಕ್ಷಣಾಧಿಕಾರಿ ಡಿ. ಕಸ್ತೂರಿ, ರಾಜ್ಯ ಸರ್ಕಾರ ಶಾಲಾ ಮಕ್ಕಳ ಪೋಷಕರಂತೆ ಕಾಳಜಿ ವಹಿಸುತ್ತಿದೆ. ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಉಸಳಿ ಕಾಳಲ್ಲಿರುವ ವಿಟಮಿನ್, ಪ್ರೋಟಿನ್‌ಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಕಡ್ಡಾಯವಾಗಿದ್ದು, ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಉಪಯೋಜನಾ ಸಮನ್ವಯಾಧಿಕಾರಿ ಕಚೇರಿಯ ಎಪಿಸಿ ಶಖೀಲ್ ಅಹ್ಮದ್, ಬಳ್ಳಾರಿ ಪಶ್ಚಿಮ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ್ ಜಿ.ಎಸ್., ಸಿರುಗುಪ್ಪ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಝಾಫರ್ ಷರೀಫ್, ಜಿಲ್ಲೆಯ ಅಪೌಷ್ಟಿಕತೆ ನಿವಾರಣೆ ಯೋಜನೆಯ ನಿಕಟಪೂರ್ವ ನೋಡಲ್ ಅಧಿಕಾರಿ ಬಸವರಾಜ್ ಮಿಂಚೇರಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.ಬಳ್ಳಾರಿ ಪೂರ್ವ ಮತ್ತು ಪಶ್ಚಿಮ ವಲಯಗಳ ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಶಿವನ ನಾಯ್ಡ್ ಸ್ವಾಗತಿಸಿದರು. ಸಂಡೂರಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ.ಪಿ ನಿರೂಪಿಸಿದರು.
;Resize=(128,128))
;Resize=(128,128))