ಸಾರಾಂಶ
ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗೆ ಪೌಷ್ಟಿಕಾಂಶದ ಆಹಾರದ ಅಗತ್ಯತೆ ಇದೆ ಎಂದು ಹೊನ್ನಾಳಿ ಜೆಎಂಎಫ್‍ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಎಸ್.ಎನ್. ತಿಳಿಸಿದರು.
ಹೊನ್ನಾಳಿ : ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗೆ ಪೌಷ್ಟಿಕಾಂಶದ ಆಹಾರದ ಅಗತ್ಯತೆ ಇದೆ ಎಂದು ಹೊನ್ನಾಳಿ ಜೆಎಂಎಫ್‍ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಎಸ್.ಎನ್. ತಿಳಿಸಿದರು. ತಾಲೂಕಿನ ಹತ್ತೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಸಮಿತಿ ಹಾಗೂ ಪೊಲಿಸ್ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಅರೋಗ್ಯವಂತರನ್ನಾಗಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಆ ಮೂಲಕ ಇಡೀ ದೇಶದಲ್ಲಿ ಆರೋಗ್ಯವಂತ ಸಮಾಜವನ್ನು ನಾವು ನೀವು ನೋಡಬಹುದು. ಮಹಿಳೆಯರು ಪೋಷಣ್ ಅಭಿಯಾನದಡಿಯಲ್ಲಿ ದೊರೆಯುವ ಪೌಷ್ಠಿಕಾಂಶ ಆಹಾರಗಳನ್ನು ಸೇವಿಸಿ ಸದೃಢರಾಗಬೇಕು ಎಂದು ಹೇಳಿದರು.ಸಿಡಿಪಿಒ ಜ್ಯೋತಿ ಮಾತನಾಡಿ, ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆಯನ್ನು ನಿವಾರಿಸುವ ದೃಷ್ಠಿಯಿಂದ 2018ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪೋಷಣ್ ಮಿಷನ್ ಅಭಿಯಾನ ಪ್ರಾರಂಭಿಸಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವ ಮಹತ್ವವನ್ನು ತಿಳಿಸಿದೆ ಎಂದರು.
2017-18 ರಲ್ಲಿ ಪ್ರಾರಂಭವಾದ ಈ ಅಭಿಯಾನದ ಮುಖ್ಯ ಗುರಿ ಶೂನ್ಯ ವರ್ಷದಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಸ್ಥಿತಿಯಲ್ಲಿ ಸುಧಾರಣೆಯನ್ನು ಸಾಧಿಸುವುದಾಗಿದೆ ಎಂದರು.ಸಹಾಯಕ ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ ಮಾತನಾಡಿ, ನಾವು ಇತ್ತೀಚಿಗೆ ಆಧುನಿಕತೆಗೆ ಮಾರುಹೋಗಿ ಆಹಾರದಲ್ಲೂ ಆಧುನಿಕತೆಯನ್ನು ಹುಡುಕುತ್ತಾ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುವಂತ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಆದ್ದರಿಂದ ನಮ್ಮ ಶರೀರ ಸದೃಢವಾಗಿರಬೇಕಾದರೆ ನೈಸರ್ಗಿಕವಾಗಿ ಸಿಗುವ ಹಾಗೂ ಬೆಳೆಯುವ ಸೊಪ್ಪು, ತರಕಾರಿ ಹಾಗೂ ಸತ್ವ ಭರಿತ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.ವೈಧ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾ.ಪಂ. ಇ.ಒ. ಪ್ರಕಾಶ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ. ಜಯಪ್ಪ, ಹಿರಿಯ ವಕೀಲ ಉಮೇಶ್ ಮಾತನಾಡಿದರು.ಹತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಈರಮ್ಮ, ಸದಸ್ಯರಾದ ಸಿದ್ದಪ್ಪ, ಮಹೇಂದ್ರಪ್ಪ, ಗ್ರಾ.ಪಂ. ಸಿದ್ದಪ್ಪ, ಪಿಡಿಒ ನಾಗರಾಜ್, ಮುಂತಾದವರು ಇದ್ದರು.