ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಟಂ ದೇವರ ಕೋಟೆ ದಲಿತರು ಸೋಮವಾರ ಚಿತ್ರದುರ್ಗಕ್ಕೆ ಪಾದಯಾತ್ರೆ ಕೈಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟಂದೇವರ ಕೋಟೆಯ ಸಂತ್ರಸ್ತ ದಲಿತರು ಸೋಮವಾರ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಚಳ್ಳಕೆರೆಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿವರೆಗೂ ಕೈಗೊಂಡಿದ್ದ ಪಾದಯಾತ್ರೆ ಅರ್ಧಕ್ಕೆ ಮೊಟಕು ಗೊಂಡಿದೆ. ಪಾದಯಾತ್ರೆ ಸಂಗತಿ ತಿಳಿಯುತ್ತಿದ್ದಂತೆ ಧಾವಿಸಿ ಬಂದ ಶಾಸಕ ಎನ್.ವೈ.ಗೋಪಾಲಕೃಷ್ಟ ಬಾಲೇನಹಳ್ಳಿ ಬಳಿ ಪಾದಯಾತ್ರಿಗಳ ತಡೆದು ಮನವೊಲಿಸುವಲ್ಲಿ ಯಶ ಕಂಡಿದ್ದಾರೆ.ಕಳೆದ ಎರಡು ತಿಂಗಳ ಹಿಂದೆ ಗ್ರಾಮದಲ್ಲಿ ಜಾತಿ ಸಂಘರ್ಷ ತಲೆದೋರಿ ಮಾದಿಗ ಸಮುದಾಯದ ಹಟ್ಟಿಗೆ ನುಗ್ಗಿ ಸವರ್ಣೀಯರು ಹಲ್ಲೆ ನಡೆಸಿದ್ದರು. ಈ ಕುರಿತು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎಂದು ದಲಿತ ಸಮುದಾಯದ ಸಂತ್ರಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸುರಿಯುವ ಮಳೆಯಲ್ಲೇ ಪ್ರತಿಭಟಿಸಿದ್ದರು. ಇದಾದ ನಂತರವೂ ಜಿಲ್ಲಾಡಳಿತ ಉದಾಸೀನತೆ ತೋರುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಪಾದಯಾತ್ರೆ ಮೂಲಕ ತಣ್ಣನೆಯ ಆಕ್ರೋಶ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು.
ಜಾತಿ ಸಂಘರ್ಷ ನಡೆದು ಗ್ರಾಮದಲ್ಲಿ ಅಶಾಂತಿ ವಾತಾವರಣ ಉಲ್ಬಣಗೊಂಡು ಅಟ್ಟಹಾಸ ನಿಂತಿಲ್ಲ. ಜಿಲ್ಲಾಡಳಿತ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ತಹಸೀಲ್ದಾರ್ ಕಂಡೂ ಕಾಣದಂತೆ ಜಾಣಮೌನಕ್ಕೆ ಜಾರಿದ್ದಾರೆ ಎಂದು ಪಾದಯಾತ್ರೆ ಕೈಗೊಂಡಿರುವ ಸಂತ್ರಸ್ಥರು ಗೋಳು ತೋಡಿಕೊಂಡರು. ಅಧಿಕಾರಿಗಳು ಗ್ರಾಮದಲ್ಲಿ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಭಯಭೀತರಾಗಿದ್ದಾರೆ. ಈಗಲೂ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದ ದಲಿತರ ಪರಿಸ್ಥಿತಿ ಶೋಚನೀಯವಾಗಿದೆ.ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕನಿಷ್ಟ ಸಂವಿಧಾನದಲ್ಲಿ ಅಡಗಿರುವ ಕಾನೂನುಗಳನ್ನಾದರೂ ಪಾಲಿಸಬೇಕಿತ್ತು. ಇದ್ಯಾವುದೂ ಆಗಿಲ್ಲದಿರುವುದು ಈ ಭಾಗದ ಜನಪ್ರತಿನಿಧಿಗಳು ದಲಿತರನ್ನು ತಮ್ಮ ಪಕ್ಷದ ಮತಬ್ಯಾಂಕ್ ಮಾಡಿಕೊಂಡು ಅಧಿಕಾರ ಹಿಡಿಯುವ ಘನ ಉದ್ದೇಶ ಹೊಂದುವ ಮನಸ್ಥಿತಿ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಜಿಲ್ಲಾಡಳಿತ ಸಂತ್ರಸ್ಥರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಡಲು ಮುಂದೆ ಬರಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ದಂಡುಕಟ್ಟಿಕೊಂಡ ಬಂದ ಎನ್ವೈಜಿ
ಕಾಟಂದೇವರ ಕೋಟೆ ಸಂತ್ರಸ್ಥರು ಪಾದಯಾತ್ರೆ ನಡೆಸುತ್ತಿರುವ ಮಾಹಿತಿ ತಿಳಿದ ತಕ್ಷಣವೇ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧಿಕಾರಿಗಳ ತಂಡವನ್ನು ಜೊತೆಗೆ ಕರೆದುಕೊಂಡು ಪಾದಯಾತ್ರಿಗಳನ್ನು ಹುಡುಕುತ್ತಾ ಚಿತ್ರದುರ್ಗದ ರಸ್ತೆಯಲ್ಲಿ ಬಂದರು. ಚಳ್ಳಕೆರೆ ಗಡಿ ಬಾಲೇನಹಳ್ಳಿ ಹತ್ತಿರದ ಮೊರಾರ್ಜಿ ವಸತಿ ಶಾಲೆಯ ಹತ್ತಿರ ಸಂತ್ರಸ್ಥರ ಅಹವಾಲು ಆಲಿಸಿದ ಶಾಸಕರು ಮುಂದಿನ ದಿನಗಳಲ್ಲಿ ನಿಮಗೆ ತಲುಪಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ಗ್ರಾಮದ ಸಮುದಾಯ ಭವನಕ್ಕೆ ಶಾಸಕರ ಅನುದಾನದಲ್ಲಿ 10ಲಕ್ಷ ಹಾಗೂ ಹಿಟ್ಟಿನ ಗಿರಣಿಗೆ 1ಲಕ್ಷ ಮಂಜೂರು ಮಾಡಲಾಗುವುದು ಎಂದರು.ಶಾಸಕ ಗೋಪಾಲಕೃಷ್ಣ ಭರವಸೆ ನೀಡಿದ ಬಳಿಕ ಸಂತ್ರಸ್ಥರು ಪಾದಯಾತ್ರೆ ಹಿಂಪಡೆಯುವುದಾಗಿ ಘೋಷಿಸಿದರು.
ತಹಶೀಲ್ದಾರ್ ರೇಹಾನಾ ಪಾಷಾ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ, ದಲಿತ ಮುಖಂಡರಾದ ವಿಜಯಕುಮಾರ್, ಹೊನ್ನೂರಸ್ವಾಮಿ, ನಾಗರಾಜ್, ಓಬಳೇಶ್ ಸೇರಿದಂತೆ ಗ್ರಾಮದ ದಲಿತ ಸಮುದಾಯದ ಸಂತ್ರಸ್ಥರು ಹಾಜರಿದ್ದರು.