ಕಾಟಾಚಾರಕ್ಕೆ ಓಬವ್ವ ಜಯಂತಿ ಆಚರಣೆ

| Published : Nov 12 2025, 02:00 AM IST

ಸಾರಾಂಶ

ತಾಲೂಕು ಆಡಳಿತದ ವತಿಯಿಂದ ತಾಲೂಕು ಮಟ್ಟದಲ್ಲಿ ಒನಕೆ ಓಬವ್ವ ಜಯಂತಿಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಕೇವಲ ಕಾಟಾಚಾರಕ್ಕೆ ಆಚರಣೆ ಮಾಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಪೂರ್ವಭಾವಿ ಸಭೆ ಕರೆಯದೇ ಜಯಂತಿ ಆಚರಣೆ ಮಾಡಿರುವುದು ಓಬವ್ವಳಿಗೆ ಮಾಡಿದ ಅಪಮಾನವಾಗಿದೆ ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಂದಹಳ್ಳಿ ಮಹೇಶ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಯಳಂದೂರು

ಒನಕೆ ಓಬವ್ವ ರಾಷ್ಟç ಕಂಡ ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದಾರೆ. ಇವರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ದಾಳಿ ನಡೆಸಿದ್ದಾಗ ಓಬವ್ವ, ಒನಕೆಯೊಂದನ್ನೇ ಅಸ್ತçವಾಗಿಟ್ಟುಕೊಂಡು ಶತ್ರುಗಳ ಸದೆ ಬಡಿದು ಹಿಮ್ಮೆಟ್ಟಿಸಿದ್ದರು. ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ನುಗ್ಗುತ್ತಿದ್ದ ಶತ್ರುಗಳನ್ನು ಏಕಾಂಗಿಯಾಗಿ ಒಬ್ಬೊಬ್ಬರನ್ನೇ ಕೊಂದು ಹಾಕಿದ್ದರು. ಇದೇ ನೆಲದಲ್ಲಿ ಹಿಂದಿನಿಂದ ಬಂದು ದಾಳಿ ನಡೆಸಿದ ಶತ್ರುಬೊಬ್ಬರಿಗೆ ಬಲಿಯಾದ ವೀರ ವನಿತೆ ಒನಕ್ಕೆ ಓಬವ್ವ ತಮ್ಮ ಪ್ರಾಣ ತ್ಯಾಗ ಮಾಡಿದ್ದರು. ನ.೧೧ ರಂದು ಇವರು ಜನಿಸಿದ ನಿಮಿತ್ತ, ವೀರ ವನಿತೆ ಇತರರಿಗೆ ಮಾದರಿಯಾಗಲಿ ಎಂಬುದನ್ನು ಅರಿತು ಇವರ ಜಯಂತಿಯನ್ನು ಸರ್ಕಾರವು ಆಚರಿಸಬೇಕು ಎಂದು ಆದೇಶ ಮಾಡಿದೆ. ಆದರೆ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಮಟ್ಟದಲ್ಲಿ ಒನಕ್ಕೆ ಓಬವ್ವ ಜಯಂತಿಯನ್ನು ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಈ ರೀತಿಯ ಕಾಟಚಾರಕ್ಕೆ ಆಯೋಜಿಸುತ್ತಿರುವುದು ಸರಿಯಾದ ಕ್ರಮವಲ್ಲ, ಇದು ಕನ್ನಡ ನೆಲದ ವೀರನಾರಿಗೆ ಗೌರವ ಸಲ್ಲಿಸುವಲ್ಲಿ ಮಾಡಿರುವ ಅನ್ಯಾಯವಾಗಿದೆ.

ಇಂತಹ ಬೆಳವಣಿಗೆಯನ್ನು ಕನ್ನಡ ಪರ ಸಂಘಟನೆಗಳು, ನಮ್ಮ ಕೆಆರ್‌ಎಸ್ ಪಕ್ಷ ಖಂಡಿಸುತ್ತದೆ. ಇದಕ್ಕೆ ಸಂಬಂಧಿಸಿದ ತಾಲೂಕು ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ ಎಂದು ಅವರು ವಿವರಿಸಿದರು.