ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಾಡು-ನುಡಿಗಾಗಿ ಕೆಚ್ಚೆದೆಯಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರವನಿತೆ ಒನಕೆ ಓಬವ್ವ ಅವರ ದೇಶಪ್ರೇಮ, ಆದರ್ಶ ಮೌಲ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಭಿಪ್ರಾಯಪಟ್ಟರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ತ್ರೀ ಅಬಲೆಯಲ್ಲ, ಸಬಲೆ ಎಂಬುದಕ್ಕೆ ಒನಕೆ ಓಬವ್ವ ಸಾಕ್ಷಿಯಾಗಿದ್ದಾರೆ. ಚಿತ್ರದುರ್ಗದ ಮದಕರಿನಾಯಕ ರಾಜನ ಕೋಟೆ ಕಾಯುವ ಕಾಯಕ ನಿರ್ವಹಿಸುತ್ತಿದ್ದ ವ್ಯಕ್ತಿಯ ಹೆಂಡತಿಯಾಗಿದ್ದ ಓಬವ್ವ ಅವರು ಸತಿಧರ್ಮದ ಜೊತೆಗೆ ನಾಡು, ನುಡಿ, ಕೋಟೆ, ಜನರ ರಕ್ಷಣೆಗಾಗಿ ಟೊಂಕಕಟ್ಟಿ ಹೋರಾಡಿದ್ದರು. ಹೈದರಾಲಿಯ ಬಲಶಾಲಿ ಸೈನ್ಯಕ್ಕೆ ಭಯ ಹುಟ್ಟಿಸಿದ್ದ ಓಬವ್ವ ಅಪಾರ ದೇಶಪ್ರೇಮಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಧೈರ್ಯ, ಸಾಹಸ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.ದೇಶದಲ್ಲಿ ಮಹಾನ್ ನಾಯಕರು, ಸಾಧು, ಸಂತರು, ಹೋರಾಟಗಾರರು ಯಾವುದೇ ಸಮುದಾಯಕ್ಕೆ ಸೀಮಿತರಾದವರಲ್ಲ. ವಿದ್ಯಾರ್ಥಿಗಳು ಅವರ ಆದರ್ಶ ತತ್ವಗಳನ್ನು ಅರಿಯಲು ಅನುಕೂಲವಾಗುವಂತೆ ಓಬವ್ವರ ಚರಿತ್ರೆಯನ್ನು ಒಳಗೊಂಡ ಪುಸ್ತಕವನ್ನು ಎಲ್ಲ ಸರ್ಕಾರಿ ಶಾಲೆಗಳಿಗೆ ತಲುಪಿಸಲಾಗುವುದು. ಆ ಮೂಲಕ ಒನಕೆ ಓಬವ್ವ ಅವರ ಚರಿತ್ರೆ ಎಲ್ಲೆಡೆ ಪಸರಿಸಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಅವರು ಮಾತನಾಡಿ, ವೀರವನಿತೆ ಎಂದರೆ ಮೊದಲು ನೆನಪಿಗೆ ಬರುವ ಹೆಸರೇ ಓಬವ್ವ. ಪುರುಷ ಪ್ರಧಾನ ಸಮಾಜದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ತಮ್ಮ ಶೌರ್ಯ ಸಾಹಸದಿಂದ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ಸಮಾಜವನ್ನು ಮುಂಚೂಣಿಗೆ ತರುವಲ್ಲಿ ಓಬವ್ವ ಕೊಡುಗೆ ಅಪಾರವಾಗಿದೆ. ಒನಕೆ ಓಬವ್ವ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ.ನಾಗರಾಜು, ಚಾ.ರಂ.ಶ್ರೀನಿವಾಸಗೌಡ, ಡಾ.ರತ್ನಮ್ಮ ಹಾಗೂ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಚರಿತ್ರೆಯಲ್ಲಿ ತಮ್ಮದೇ ಇತಿಹಾಸ ಸೃಷ್ಟಿಸಿದ ಮಹಿಳೆಯರು ಅನೇಕರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೆಳವಾಡಿ ಮಲ್ಲಮ್ಮರಂತೆ ಒನಕೆ ಓಬವ್ವ ಅವರು ಸಹ ಪ್ರಮುಖ ಸ್ಥಾನ ಪಡೆದಿದ್ದಾರೆ. ನಾಡಿಗೆ ಕೀರ್ತಿ ತಂದಿದ್ದಾರೆ. ಅವರೆಲ್ಲರ ಸ್ಮರಣೆ ಅವಶ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಮುಖಂಡರಾದ ಕೇತಮ್ಮ, ಮಹೇಶ್, ಸಿ.ಮಾದೇಗೌಡ ಉಪಸ್ಥಿತರಿದ್ದರು.