ದೇಶವೇ ಮೊದಲು ಎಂದು ಬದುಕಿದ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆ: ಕೋಟ

| Published : Nov 13 2025, 01:45 AM IST

ದೇಶವೇ ಮೊದಲು ಎಂದು ಬದುಕಿದ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆ: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಮಣಿಪಾಲ: ಒನಕೆ ಓಬವ್ವ ಆತ್ಮರಕ್ಷಣೆಯ ಪ್ರತೀಕ. ಭಾರತೀಯ ಹೆಣ್ಣುಮಕ್ಕಳು ತಮ್ಮ ಆತ್ಮ ರಕ್ಷಣೆಯ ಜೊತೆಗೆ ತನ್ನ ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ ಎನ್ನುವುದಕ್ಕೆ ಒನಕೆ ಓಬವ್ವ ಸಾಕ್ಷಿ, ಆಕೆ ತನ್ನ ಅಪ್ರತಿಮ ಸಾಹಸಕ್ಕಾಗಿ ಆಕೆ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನಂತಹ ವೀರ ಮಹಿಳೆಯರ ಸಾಲಿನಲ್ಲಿ ನಿಲ್ಲುತ್ತಾರೆ. ತನಗಿಂತ ತನ್ನ ದೇಶ ಮೊದಲೆಂದು ಬದುಕಿದ ಇಂತಹ ವೀರವನಿತೆ ಓಬವ್ವನ ತ್ಯಾಗ, ದೇಶ ಪ್ರೇಮ, ಸ್ವಾಮಿನಿಷ್ಠೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಇಲ್ಲಿನ ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದಾಗ ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ೮೦೦ ಶಾಲೆಗಳು ಮತ್ತು ೩೫೦೦ ಹಾಸ್ಟೆಲ್ ಗಳಲ್ಲಿ ಕರಾಟೆ ಕಲಿಸುವ ಯೋಜನೆಗೆ ಒನಕೆ ಓಬವ್ವನ ಹೆಸರಿಟ್ಟು ಆಕೆಯ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿದೆ ಎಂದು ಹೇಳಿದರು.ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಸ್ತ್ರೀಶಕ್ತಿಯ ಸಂಕೇತವಾಗಿ ಇಂದಿಗೂ ಮಹಿಳೆಯರಿಗೆ ಓಬವ್ವಳ ಹೋರಾಟದ ಮನೋಭಾವ ಸದಾ ಸ್ಫೂರ್ತಿದಾಯಕವಾಗಿದೆ ಎಂದರು.

ಕುಂದಾಪುರದ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಕೋಶದ ಸುಬ್ರಹ್ಮಣ್ಯ ಶೆಟ್ಟಿ, ಮಣಿಪಾಲ ಪಪೂ ಕಾಲೇಜಿನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಉಪಪ್ರಾಂಶುಪಾಲ ನಾಗೇಂದ್ರ ಪೈ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ವರ್ಷಾ ನಿರೂಪಿಸಿ, ಕಾಲೇಜಿನ ಹಿರಿಯ ಶಿಕ್ಷಕ ಸಚ್ಚಿದಾನಂದ ವಂದಿಸಿದರು.