ಒಬಿಸಿ ಸಲಹಾ ಸಮಿತಿಯಿಂದ 3 ನಿರ್ಣಯ ಮಂಡನೆ

| Published : Jul 17 2025, 12:30 AM IST

ಸಾರಾಂಶ

ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಆಧಾರಿತ ಜನಗಣತಿಗೆ ತೆಲಂಗಾಣ ಮಾದರಿ ಅನುಸರಿಸುವುದು, ಶಿಕ್ಷಣ, ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಶೇ.50ರಿಂದ 75ಕ್ಕೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ, ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ರ್‍ಯಾಲಿ ನಡೆಸುವುದು ಸೇರಿ ಇನ್ನಿತರ ವಿಷಯಗಳ ಕುರಿತು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಆಧಾರಿತ ಜನಗಣತಿಗೆ ತೆಲಂಗಾಣ ಮಾದರಿ ಅನುಸರಿಸುವುದು, ಶಿಕ್ಷಣ, ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಶೇ.50ರಿಂದ 75ಕ್ಕೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ, ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ರ್‍ಯಾಲಿ ನಡೆಸುವುದು ಸೇರಿ ಇನ್ನಿತರ ವಿಷಯಗಳ ಕುರಿತು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಖಾಸಗಿ ಹೋಟೆಲ್‌ನಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ 2ನೇ ದಿನದ ಸಭೆಯಲ್ಲಿ ಒಬಿಸಿ ಸಮುದಾಯದವನ್ನು ಒಗ್ಗೂಡಿಸುವುದು, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಬಲ ತುಂಬುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಯಾವೆಲ್ಲ ವಿಚಾರಗಳ ಕುರಿತು ಒತ್ತಡ ಹೇರಬೇಕು ಎಂಬ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಒಬಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವರಿಗೆ ಶಕ್ತಿ ತುಂಬುವಂತಹ ವಿಷಯಗಳ ಕುರಿತು ನಿರ್ಣಯಿಸಲಾಯಿತು.

ತೆಲಂಗಾಣ ಮಾದರಿ ಅನುಸರಿಸಿ:

ಸಭೆಯಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಆಧಾರಿತ ಜನಗಣತಿ ಕುರಿತು ಮುಖ್ಯವಾಗಿ ವಿಸ್ತೃತ ಚರ್ಚೆ ನಡೆಸಲಾಯಿತು. ಹಾಗೆಯೇ, ಹಾಲಿ ಇರುವ ಶೇ.50ರ ಮೀಸಲಾತಿ ಮಿತಿಯನ್ನು ಶೇ.75ರವರೆಗೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಅದನ್ನು ಶಿಕ್ಷಣ, ಸರ್ಕಾರಿ ನೌಕರಿ (ಸೇವೆ), ರಾಜಕೀಯ ಸೇರಿ ಮತ್ತಿತರ ಕ್ಷೇತ್ರಗಳಿಗೂ ಅನ್ವಯವಾಗುವಂತೆ ಮಾಡಬೇಕು. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯ ತೆಗೆದುಕೊಳ್ಳಲಾಯಿತು.

ಜು.25ಕ್ಕೆ ನ್ಯಾಯ ಸಮ್ಮೇಳನ:

ಒಬಿಸಿ ಸಮುದಾಯದೊಂದಿಗೆ ಕಾಂಗ್ರೆಸ್‌ ಇರಲಿದೆ ಹಾಗೂ ಒಬಿಸಿ ಸಮುದಾಯದವರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಜು.25ರಂದು ನವದೆಹಲಿಯಲ್ಲಿ ‘ಕಾಂಗ್ರೆಸ್‌ ಒಬಿಸಿ ನಾಯಕತ್ವ ಭಾಗೀದಾರ ನ್ಯಾಯ ಸಮ್ಮೇಳನ’ ಆಯೋಜನೆಗೆ ಸಭೆಯಲ್ಲಿ ನಿರ್ಧರಿಸಲಾಯಿತು. ದೇಶದ ಎಲ್ಲ ರಾಜ್ಯಗಳಲ್ಲಿನ ಒಬಿಸಿ ಸಮಸ್ಯೆಗಳನ್ನು ಅರಿಯುವ ಉದ್ದೇಶದೊಂದಿಗೆ ಪ್ರತಿ ರಾಜ್ಯಗಳಲ್ಲೂ ಒಬಿಸಿ ಕಾರ್ಯಾಗಾರ ಆಯೋಜನೆ, ಪ್ರತಿ ರಾಜ್ಯದ ರಾಜಧಾನಿಯಲ್ಲಿ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಾರ್ವಜನಿಕ ರ್‍ಯಾಲಿ ಆಯೋಜಿಸಲು ನಿರ್ಧರಿಸಲಾಯಿತು. ಈ ಎಲ್ಲ ನಿರ್ಣಯಗಳನ್ನು ಸಮಿತಿ ಸದಸ್ಯರು ಕೈ ಎತ್ತುವ ಮೂಲಕ ಸಮ್ಮತಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಲಹಾ ಸಮಿತಿ ಸಂಚಾಲಕ ಅನಿಲ್‌ ಜೈಹಿಂದ್, ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಅಶೋಕ್ ಗೆಹಲೋಟ್‌, ಭುಪೇಶ್‌ ಬಘೇಲ್‌ ಇತರರಿದ್ದರು.

ಅದರಲ್ಲಿ ಹಾಲಿ ನಿಗದಿ ಮಾಡಲಾಗಿರುವ ಅಂಶಗಳ ಜತೆಗೆ ತೆಲಂಗಾಣ ರಾಜ್ಯದಲ್ಲಿ ನಡೆಸಿರುವಂತೆ ಜಾತಿ ಆಧಾರಿತ ಜನಗಣತಿ ನಡೆಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಪ್ರಮುಖವಾಗಿ ಜನಗಣತಿ ವೇಳೆ ಜಾತಿ ನಮೂದಿಸುವುದರ ಜತೆಗೆ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ವಿಷಯಗಳ ಕುರಿತು ಮಾಹಿತಿ ಪಡೆಯಬೇಕು. ಅದರಿಂದ ದೇಶದ ಜನರ ನೈಜ ಪರಿಸ್ಥಿತಿ ಅರಿಯಬಹುದಾಗಿದೆ.

ನ್ಯಾಯ ಯೋಧ ರಾಹುಲ್‌ ಗಾಂಧಿ:

ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಹೊಸ ಬಿರುದು ನೀಡಿದರು. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸಮಾಜಿಕ ನ್ಯಾಯ ಒದಗಿಸುವ ಸಲುವಾಗಿ ವಿಶೇಷ ಕಾಳಜಿ ಹೊಂದಿರುವ ನ್ಯಾಯ ಯೋಧ ರಾಹುಲ್‌ ಗಾಂಧಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ, ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷದ ಹೋರಾಟ, ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿ ಆಧಾರಿತ ಜನಗಣತಿ ಮಾಡುವುದಾಗಿ ಘೋಷಿಸಿದೆ. ಕಾಂಗ್ರೆಸ್‌ ಪಕ್ಷ ಸದಾ ಹಿಂದುಳಿದ ಸಮುದಾಯದ ಪರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಜಾತಿ ಗಣತಿ ವರದಿಗೆ ಎಚ್‌ಡಿಕೆ ತಡೆ: ಸಿದ್ದು

ಜಾತಿ ಗಣತಿಗೆ ಕರ್ನಾಟಕ ಮಾದರಿ ಬದಲು ತೆಲಂಗಾಣ ಮಾದರಿ ಅನುಸರಿಸುವ ನಿರ್ಣಯದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, 2015ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಆಧಾರದ ಮೇಲೆ ಜಾತಿ ಆಧಾರಿತ ಜನಗಣತಿ ಮಾಡಲು ಆದೇಶಿಸಲಾಗಿತ್ತು. ಅದರಂತೆ 2018ರಲ್ಲಿ ವರದಿ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಆಯೋಗವು ವರದಿ ಸಲ್ಲಿಸಲು ಮುಂದಾಗಿತ್ತು. ಆಗ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರ್‌ಸ್ವಾಮಿ ಅವರು ವರದಿ ಸ್ವೀಕರಿಸಲಿಲ್ಲ. ಅಲ್ಲದೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರಿಗೂ ವರದಿ ಸ್ವೀಕರಿಸದಂತೆ ಸೂಚಿಸಿದ್ದರು. ಅದಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ವರದಿ ಸ್ವೀಕರಿಸಲಿಲ್ಲ. ನಾವು ಈಗ ವರದಿ ಸ್ವೀಕರಿಸಿದ್ದರೂ, ಅದನ್ನು ರಚಿಸಿ 10 ವರ್ಷಗಳಾದ ಕಾರಣ ಮರುಸಮೀಕ್ಷೆ ನಡೆಸಬೇಕಿದೆ. ಇದು ಅಪೂರ್ಣವಾಗಿರುವ ಕಾರಣ ತೆಲಂಗಾಣ ಮಾದರಿ ಅನುಸರಿಸುವಂತೆ ಸೂಚಿಸಲು ನಿರ್ಧರಿಸಲಾಗಿದೆ ಎಂದರು.

ಮತಬ್ಯಾಂಕ್‌ ಮಾಡುವ ಉದ್ದೇಶವಿಲ್ಲ

ಸಲಹಾ ಸಮಿತಿ ಸಭೆಯಲ್ಲಿ, ಬಿಹಾರ ಚುನಾವಣೆ ಸೇರಿದಂತೆ ಬೇರೆ ಯಾವುದೇ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ. ಅಲ್ಲದೆ, ಒಬಿಸಿ ಸಮಾವೇಶ, ಸಾರ್ವಜನಿಕ ರ್‍ಯಾಲಿ ನಡೆಸುವ ಮೂಲಕ ಒಬಿಸಿ ಸಮುದಾಯವನ್ನು ಮತ ಬ್ಯಾಂಕ್‌ ಮಾಡಿಕೊಳ್ಳುವ ಉದ್ದೇಶವೂ ಪಕ್ಷಕ್ಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಲ್ಲ ನಾಯಕರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯಗೆ ಅಭಿನಂದನೆ

ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ಮೂರು ನಿರ್ಣಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದಿಸುವ ನಿರ್ಣಯವೂ ಒಂದಾಗಿದೆ. ಸಲಹಾ ಸಮಿತಿ ಸಂಚಾಲಕ ಅನಿಲ್‌ ಜೈಹಿಂದ್‌ ಮಂಡಿಸಿದ ನಿರ್ಣಯದಲ್ಲಿ, ಸಮಿತಿ ಸಭೆಯನ್ನು ಆಯೋಜಿಸಿ ಯಶಸ್ವಿಗೊಳಿಸಿದ ಕಾರಣಕ್ಕಾಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಜತೆಗೆ ಒಬಿಸಿ ಸಮುದಾಯದವರಿಗಾಗಿ ಕೈಗೊಳ್ಳಲಾಗಿರುವ ಕ್ರಮಗಳಿಗಾಗಿ ನ್ಯಾಯ ಯೋಧ ರಾಹುಲ್‌ ಗಾಂಧಿ ಅವರಿಗೂ ಧನ್ಯವಾದ ಅರ್ಪಿಸಲಾಯಿತು.

ಮನುವಾದಿ ಮೋದಿ ಸರ್ಕಾರ

ಕೇಂದ್ರದಲ್ಲಿರುವ ಮನುವಾದಿ ಮೋದಿ ಸರ್ಕಾರದಿಂದ ಜಾತಿ ಗಣತಿಯನ್ನು ಮಾಡಿಸುತ್ತಿರುವ ಕೀರ್ತಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತದೆ. ಅಲ್ಲದೆ, ದೇಶದಲ್ಲಿ ಸಮಾನತೆ ತರುವುದು, ಹಿಂದುಳಿದವರನ್ನು ಮೇಲೆತ್ತುವ ಉದ್ದೇಶದೊಂದಿಗೆ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಕೆಲಸ ಮಾಡಲಿದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ