ಸಾರಾಂಶ
ಬೊಜ್ಜು ನಿಯಂತ್ರಣಕ್ಕಾಗಿ ವೈದ್ಯರಿಂದ ಜಾಗೃತಿ ಜಾಥಾ । ಸ್ಥೂಲಕಾಯದ ಬಗ್ಗೆ ಅರಿವುಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚಿನ ಸಮೀಕ್ಷೆ ಪ್ರಕಾರ ಪ್ರಪಂಚಾದ್ಯಂತ ನೂರು ಕೋಟಿ ಜನರಿಗೆ ಬೊಜ್ಜಿನ ಸಮಸ್ಯೆ ಕಂಡು ಬಂದಿದೆ. ಅದರಲ್ಲೂ ಮಕ್ಕಳಲ್ಲೇ ಹೆಚ್ಚು ಕಾಣಿಸುತ್ತಿದೆ. ಭಾರತದಲ್ಲಿ ಒಂದೂ ಕಾಲು ಕೋಟಿ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಂಡು ಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ದೇವದಾಸ್ ಹೇಳಿದರು.ಭಾರತೀಯ ವೈದ್ಯಕೀಯ ಸಂಘ, ಪ್ರಸ್ತೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ಶಿಶು ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬೊಜ್ಜು (ಸ್ಥೂಲಕಾಯ) ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
೭೫ ಲಕ್ಷ ಜನ ಗಂಡು ಮಕ್ಕಳಿಗೆ, ೬೫ ಲಕ್ಷ ಹೆಣ್ಣು ಮಕ್ಕಳಿಗೆ ಸ್ಥೂಲಕಾಯ ಶುರುವಾಗಿದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಬಹಳ ಬದಲಾವಣೆಯಾಗಿದೆ. ಜಂಕ್ ಫುಡ್ ಸೇವನೆಯಿಂದ ಮತ್ತು ಡ್ರಿಂಕ್ ಕುಡಿಯುವುದರಿಂದ ಮಕ್ಕಳ ದೇಹದಲ್ಲಿ ಭಾರ ಹೆಚ್ಚು ಕಾಣುತ್ತಿದೆ. ವ್ಯಾಯಾಮ ಮಾಡುವುದು ಕಡಿಮೆ ಮಾಡಿ ಮೊಬೈಲ್ ಬಳಕೆ ಹೆಚ್ಚು ಆಗಿದೆ. ಈ ಎಲ್ಲಾ ಕಾರಣದಿಂದಲೇ ಬೊಜ್ಜು ಜಾಸ್ತಿ ಆಗುತ್ತಿದೆ. ಈಗ ಬೊಜ್ಜು ಒಂದು ಸಾಮಾಜಿಕ ಪಿಡುಗು ಆಗಿ ಮಾರ್ಪಟ್ಟಿದೆ. ಬೊಜ್ಜು ಬಂತೆಂದರೆ ಹಲವಾರು ಸಮಸ್ಯೆಗಳು ಹಾಗೂ ನೂರಾರು ಖಾಯಿಲೆಗಳು ದೇಹದಲ್ಲಿ ಕಾಣಿಸಲು ಪ್ರಾರಂಭಿಸುತ್ತದೆ. ಸಾರ್ವಜನಿಕರು ಈಗಲಾದರೂ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಒಳ್ಳೆಯ ಆಹಾರ ಪದ್ಧತಿ ರೂಡಿಸಿಕೊಂಡು ಪ್ರತಿನಿತ್ಯ ಕೆಲ ಸಮಯ ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ದಿನೇಶ್ ಮಾತನಾಡಿ, ವಿಶ್ವ ಬೊಜ್ಜು ದಿನಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜನರಲ್ಲಿ ಬರುವ ಬೊಜ್ಜಿನಿಂದ ಅನೇಕ ಖಾಯಿಲೆಗಳು ಹರಡಿ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ. ಹಣ್ಣು, ತರಕಾರಿ, ನೀರು ಹೆಚ್ಚು ಬಳಕೆ ಮಾಡಬೇಕು. ಸಿಹಿ ಸೇವನೆ ಕಡಿಮೆ ಮಾಡಬೇಕು. ನಿಯಮಿತವಾದ ವ್ಯಾಯಾಮ, ವಾಕಿಂಗ್ ಮಾಡಬೇಕು ಎಂದರು.
ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಮತ್ತು ಮಕ್ಕಳ ತಜ್ಞ ಡಾ.ಎಚ್.ಪಾಲಾಕ್ಷ ಮಾತನಾಡಿ, ಸಾರ್ವಜನಿಕರಲ್ಲಿ ಬೊಜ್ಜಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಲ್ಲಿ ಬೊಜ್ಜುತನ ಹೆಚ್ಚು ಕಂಡು ಬರುತ್ತಿದೆ. ಇದರಿಂದ ಸಣ್ಣ ವಯಸ್ಸಿನಲ್ಲೆ ಖಾಯಿಲೆ ಹಾಗೂ ಸಾವು ಸಂಭವಿಸುತ್ತಿದೆ. ಇದನ್ನು ತಡೆಯಲು ಆಹಾರದ ಬಗ್ಗೆ ಗಮನ ನೀಡಬೇಕೆಂದರು.ಪ್ರಸೂತಿ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಗಿರಿಜಾ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅಬ್ದೂಲ್ ಬಶೀರ್, ಪ್ರಸೂತಿ ಸ್ತ್ರೀ ರೋಗ ತಜ್ಞೆ ಡಾ. ಸಾವಿತ್ರಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಯತೀಶ್, ಡಾ. ಭವ್ಯ ಇದ್ದರು.ಬೊಜ್ಜಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಸನ ನಗರದ ಹೇಮಾವತಿ ಪ್ರತಿಮೆ ಮುಂಭಾಗ ವೈದ್ಯರು ಜಾಗೃತಿ ಜಾಥಾ ನಡೆಸಿದರು.