ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ವೀರೇಶ್ವರ ಪುಣ್ಯಾಶ್ರಮವಿಲ್ಲದಿದ್ದರೆ ಅನೇಕ ಪ್ರತಿಭೆಗಳು ಇಂದು ಬೆಳಕಿಗೆ ಬರುತ್ತಿರಲಿಲ್ಲ ಎಂದು ಗದುಗಿನ ತೋಂಟದಾರ್ಯ ಮಠದ ಜ. ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳ 80ನೇ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯಸ್ಮರಣೆಯ ಅಂಗವಾಗಿ ಜರುಗಿದ ಶಿವಾನುಭವಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಉಭಯ ಶ್ರೀಗಳನ್ನು ಪಡೆದಿರುವ ನಾವೇ ಧನ್ಯರು. ಅವರ ಬದುಕನ್ನು ಅದರ್ಶವಾಗಿಟ್ಟುಕೊಂಡು ನಾವೇಲ್ಲರೂ ಬದುಕಬೇಕಾಗಿದೆ. ಪಂ. ಪುಟ್ಟರಾಜ ಗವಾಯಿಗಳವರ ನಂತರ ಏನು ಎಂಬ ಪ್ರಶ್ನೆಗೆ ಕಲ್ಲಯ್ಯಜ್ಜನವರು ಉತ್ತರ ನೀಡಿದ್ದಾರೆ ಎಂದು ಹೇಳಿದರು. ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎನ್ನುವುದು ಎಲ್ಲ ಭಕ್ತರ ಆಸೆಯಾಗಿದೆ.
ಭಕ್ತರ ಆಸೆಯನ್ನು ಸರಕಾರ ಈಡೇರಿಸಬೇಕು ಮತ್ತು ಸರಕಾರ ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ಸಂಗೀತ ವಿಭಾಗ ತೆರೆದು ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇದರಿಂದ ಸಾವಿರಾರು ಸಂಗೀತ ಶಿಕ್ಷಕರ ಬದುಕು ಹಸನಾಗುತ್ತದೆ. ದೂರದ ಬೀದರನಲ್ಲಿ ವೀರೇಶ್ವರ ಪುಣ್ಯಾಶ್ರಮದ ಶಾಖಾ ಮಠ ನಿರ್ಮಾಣಕ್ಕೆ ಅಲ್ಲಿನ ಭಕ್ತರು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಆ ಭಾಗದ ಅಂಧ-ಅನಾಥರಿಗೆ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪುಣ್ಯದ ಕೆಲಸವಾಗಲಿದೆ ಎಂದು ಹೇಳಿದರು.ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಕೋಟಿಗೊಬ್ಬ ಶರಣರು ಎಂದು ಚನ್ನಮಲ್ಲಿಕಾರ್ಜುನ ಶರಣರು ಹೇಳಿದ್ದಾರೆ. ಅದೇರೀತಿ ಕೋಟಿಗೊಬ್ಬ ಪುಟ್ಟರಾಜರು ಎಂದು ಹೇಳಿದರೆ ತಪ್ಪಾಗಲಾರದು. ಕಣ್ಣಿದ್ದವರು ಮಾಡಲಾರದ ಸಾಧನೆಯನ್ನು ಕಣ್ಣು ಇಲ್ಲದ ಉಭಯ ಶ್ರೀಗಳು ಮಾಡಿದ್ದಾರೆ ಎಂದು ಹೇಳಿದರು.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಉಭಯಶ್ರೀಗಳನ್ನು ಸ್ಮರಿಸುವುದೇ ಒಂದು ಸಾಧನೆಯಾಗಿದೆ. ಹಿರಿಯರನ್ನು ಐದಾರು ವರ್ಷಕ್ಕೆ ಮರೆತು ಮನೆಯಲ್ಲಿರುವ ಹಿರಿಯರ ಭಾವಚಿತ್ರ ಮರೆಯಾಗುವ ಇಂದಿನ ದಿನಗಳಲ್ಲಿ ಕಳೆದ 80 ವರ್ಷಗಳಿಂದ ಪಂ. ಪಂಚಾಕ್ಷರಿ ಗುರುಗಳನ್ನು ಸ್ಮರಿಸುತ್ತ ಬಂದಿರುವುದು ಒಂದು ಸಾಧನೆಯಾಗಿದೆ ಎಂದು ಹೇಳಿದರು.ಬೀದರಿನ ಗಾನಯೋಗಿ ಪಂಚಾಕ್ಷರ ಸೇವಾ ಸಂಘದ ಗೌರವಾಧ್ಯಕ್ಷ ಸಂಗಯ್ಯ ಕಲ್ಮಠ ಮಾತನಾಡಿ, ದೂರದ ಬೀದರಿನಲ್ಲಿ ಕಳೆದ 40 ವರ್ಷಗಳಿಂದ ಉಭಯ ಗುರುಗಳನ್ನು ಸ್ಮರಿಸುವ ಕೆಲಸವನ್ನು ಮಾಡುತ್ತ ಬರಲಾಗುತ್ತಿದೆ. ಈಗ ಸುಮಾರು 8 ಸಾವಿರ ಚದುರ ಅಡಿಯ ಜಾಗವನ್ನು ಖರೀದಿಸಿದ್ದು, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಡಿಯಲ್ಲಿ ಶಾಖಾ ಮಠವನ್ನು ನಡೆಸಿಕೊಂಡು ಹೋಗಬೇಕೆನ್ನುವುದು ನಮ್ಮೆಲ್ಲರ ಅಸೆಯಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಗುಳೇದದಗುಡ್ಡ ಮುರುಘಾಮಠದ ಕಾಶಿನಾಥ ಶ್ರೀಗಳು, ಎಚ್.ಎಸ್. ವೆಂಕಟಾಪೂರ-ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಂಗಮೇಶ ದುಂದೂರ, ಪ್ರಕಾಶ ಬಸರಿಗಿಡದ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್‌ನ ಸದಸ್ಯ ಪರಶುರಾಮ ಕಟ್ಟಿಮನಿ, ಅರುಣ ಕಟ್ಟಿಮನಿ, ಡಾ. ವೈ.ಕೆ. ಭಜಂತ್ರಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ, ಬೀದರಿನ ಗಾನಯೋಗಿ ಪಂಚಾಕ್ಷರ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ ಉಪಸ್ಥಿತರಿದ್ದರು. ದೀಯಾ ಕೌತಾಳ ಪ್ರಾರ್ಥನೆ ಮಾಡಿದರು. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು. ಸಿದ್ದೇಶ್ವರ ಶಾಸ್ತ್ರಿಗಳು ತೆಲ್ಲೂರ ನಿರೂಪಿಸಿದರು. ನಂತರ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮ ಜರುಗಿತು.