ಗ್ರಾಮಸ್ಥರ ಆಕ್ಷೇಪ: ಶಾಲಾ ಕಟ್ಟಡ ಕಾಮಗಾರಿ ಸ್ಥಗಿತ

| Published : Aug 12 2024, 12:47 AM IST

ಸಾರಾಂಶ

ಲಕ್ಷಾಂತರೂ ವೆಚ್ಚದಲ್ಲಿ ನಿರ್ಮಾಣ ಕೈಗೊಂಡಿರುವ ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿ ಸರ್ಕಾರಿ ಪೌಢಶಾಲಾ ಕಟ್ಟಡ ಕಳೆದ ನಾಲ್ಕು ವರ್ಷಗಳಿಂದ ಆಮೆ ನಡಿಗೆಯಲ್ಲಿ ಸಾಗಿರುವುದರಿಂದ ಕಟ್ಟಡದಲ್ಲಿ ಈಗ ರಾತ್ರಿಯ ವೇಳೆ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರ ಒಂದು ಕಡೆ ಬಡ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲಿ ಎಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಮಕ್ಕಳಿಗೆ ಆಕರ್ಷಕ ಯೋಜನೆಗಳನ್ನು ರೂಪಿಸಿದೆ. ಆದರೆ ಮತ್ತೊಂದು ಕಡೆ ಶೈಕ್ಷಣಿಕ ಪ್ರಗತಿಗೆ ಪ್ರಮುಖವಾಗಿ ಬೇಕಾದ ಶಾಲಾ ಕಟ್ಟಡಗಳನ್ನೇ ಕಲ್ಪಿಸದೆ ಕಡೆಗಣಿಸಿದೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ತಾಜ ಉದಾಹರಣೆ ಎಂದರೆ ತಾಲೂಕಿನ ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಾಗಿ ಬೇಕಾಗಿರುವ ಕಟ್ಟಡಗಳೇ ಇಲ್ಲ, ಇದ್ದರೂ ಶಿಥಿಲಾವಸ್ಥೆಯಲ್ಲಿವೆ. ಅದರಲ್ಲೆ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ.

ಆಮೆಗತಿಯಲ್ಲಿ ಕಟ್ಟಡ ಕಾಮಗಾರಿ

ಇದು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಕನ್ನಡಿಯಾಗಿದೆ. ಲಕ್ಷಾಂತರೂ ವೆಚ್ಚದಲ್ಲಿ ನಿರ್ಮಾಣ ಕೈಗೊಂಡಿರುವ ತಾಲೂಕಿನ ಬೋಡೇನಹಳ್ಳಿ ಸರ್ಕಾರಿ ಪೌಢಶಾಲಾ ಕಟ್ಟಡ ಕಳೆದ ನಾಲ್ಕು ವರ್ಷಗಳಿಂದ ಆಮೆ ನಡಿಗೆಯಲ್ಲಿ ಸಾಗಿರುವುದರಿಂದ ಕಟ್ಟಡದಲ್ಲಿ ಈಗ ರಾತ್ರಿಯ ವೇಳೆ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ಅಡ್ಡಯಾಗಿ ಮಾರ್ಪಟ್ಟಿದ್ದರೂ ಶಿಕ್ಷಣ ಇಲಾಖೆ ಮಾತ್ರ ಗಮನಹರಿಸುತ್ತಿಲ್ಲ.ಬೋಡೇನಹಳ್ಳಿ ಗ್ರಾಮದಲ್ಲಿ ೧ರಿಂದ ೧೦ನೇ ತರಗತಿವರೆಗೂ ಸರ್ಕಾರಿ ಶಾಲೆ ಇದೆ. ಈ ಶಾಲೆಯಲ್ಲಿ ೧೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು,ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಕೊರತೆಯಿಂದ ಶಿಥಿಲ ಕೋಣೆಯಲ್ಲೆ ಮಕ್ಕಳು ಪಾಠ ಆಲಿಸುವಂತಾಗಿದೆ. ಗ್ರಾಮದ ಶಾಲಾ ಕೊಠಡಿಗಳ ಸಮಸ್ಯೆಗಳನ್ನು ನಿವಾರಿಸಲು ಇಲಾಖೆ ೪ ವರ್ಷಗಳ ಹಿಂದೆಯೇ ೧.೪೮ ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು, ಆದರೆ ಹಲವು ವಿಘ್ನಗಳಿಂದ ಕಾಮಗಾರಿ ಮುಂದೆ ಸಾಗದೆ ಸ್ಥಗಿತವಾಗಿದೆ.

ಕಾಮಗಾರಿಗೆ ನೂರೆಂಟು ವಿಘ್ನ

ಇದರಿಂದ ಕಟ್ಟಡ ಈಗ ಕುಡುಕರ,ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಬದಲಾಗಿರುವುದು ನೋವಿನ ಸಂಗತಿ. ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ಹಿಂದೆ ನೂತನ ಶಾಲಾ ಕಟ್ಟಡ ಕಾಮಗಾರಿಗೆ ಗ್ರಾಮದ ಸಮೀಪವಿರುವ ಗುಟ್ಟೂರು ಗ್ರಾಮದ ಕೆರೆಯ ಸಮೀಪದ ಸ್ಥಳ ನಿಗದಿಪಡಿಸಲಾಗಿತ್ತು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಶಾಲಾ ಕಟ್ಟಡ ನಿರ್ಮಾಣ ಮಾಡುವ ಮೊದಲು ಗ್ರಾಮದವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.

ಅಲ್ಲದೆ ಗ್ರಾಮದ ಒಬ್ಬರಿಗೆ ಅಡುಗೆ ತಯಾರಕರ ಕೆಲಸವನ್ನು ನೀಡಬೇಕು ಎಂದು ಶರತ್ತು ಹಾಕಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಕಾಮಗಾರಿ ಆರಂಭಿಸುವ ವೇಳೆ ಮತ್ತೆ ತಗಾದೆ ತೆಗೆದ ಗ್ರಾಮಸ್ಥರು ಹಣಕ್ಕೆ ಬೇಡಿಕೆ ಇಟ್ಟರು. ಇದರಿಂದಾಗಿ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಕೆರೆಯನ್ನು ಒತ್ತುವರಿ ಮಾಡಿಕೊಂಡು ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ನ್ಯಾಯಾಲಯ ಮಟ್ಟಿಲೇರಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ.

ಇದರಿಂದ ಬಡ ಮಕ್ಕಳ ಶೈಕ್ಷಣಿಕ ಕಲಿಕೆಗೆ ಸ್ಥಳಾವಕಾಶ ಕೊರತೆಯಿಂದ ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಶಿಕ್ಷಣ ಇಲಾಖೆ ಕೋರ್ಟ್‌ನಲ್ಲಿರುವ ದಾವೆಯನ್ನು ಇತ್ಯರ್ಥಪಡಿಸಿ ಶೀಘ್ರ ಸ್ಥಗಿತವಾಗಿರುವ ಕಟ್ಟಡ ಕಾಮಗಾರಿಯನ್ನು ಆರಂಭಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.