ಸಂವಿಧಾನಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಎಡಗೈ ಸಮುದಾಯದ ನಾಯಕ ಡಾ.ಜಗಜೀವನರಾಂ ಅವರ ಫೋಟೋ ಇಟ್ಟಿರುವುದಕ್ಕೆ ಎಂದು ಬಲಗೈ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಅಧಿಕಾರಿಗಳ ಸಮುಖದಲ್ಲಿಯೇ ವಾಗ್ವಾದ ನಡೆದು ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ಪಾಂಡವಪುರ ಪಟ್ಟಣದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂವಿಧಾನಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಎಡಗೈ ಸಮುದಾಯದ ನಾಯಕ ಡಾ.ಜಗಜೀವನರಾಂ ಅವರ ಫೋಟೋ ಇಟ್ಟಿರುವುದಕ್ಕೆ ಎಂದು ಬಲಗೈ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಅಧಿಕಾರಿಗಳ ಸಮುಖದಲ್ಲಿಯೇ ವಾಗ್ವಾದ ನಡೆದು ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಅವರ ಜಯಂತಿ ಆಯೋಜಿಸಲಾಗಿತ್ತು. ಆರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಜೊತೆಗೆ ಡಾ.ಬಾಬುಜಗಜೀವನ ರಾಂ ಅವರ ಭಾವಚಿತ್ರವನ್ನು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಇಟ್ಟು ಕಾರ್ಯಯಕ್ರಮ ನಡೆಸಲು ಮುಂದಾದಾಗ ಬಲಗೈ ಸಮುದಾಯದ ಮುಖಂಡರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಹಾಗಾಗಿ ಅಂಬೇಡ್ಕರ್ ಭಾವಚಿತ್ರವನ್ನು ಮಾತ್ರ ಹಾಕಿ ಕಾರ್ಯಕ್ರಮ ನಡೆಸಬೇಕು, ಅವರ ಜೊತೆಗೆ ಡಾ.ಬಾಬುಜಗಜೀವನರಾಂ ಅವರ ಭಾವಚಿತ್ರ ಹಾಕುವುದು ಸರಿಯಲ್ಲ. ಈಗಾಗಲೇ ಬಾಬು ಜಗಜೀವನ ರಾಂ ಅವರ ಜಯಂತಿ ಆಚರಿಸಲಾಗಿದೆ. ಮತ್ತೆ ಅಂಬೇಡ್ಕರ್ ಜಯಂತಿ ವೇಳೆ ಬಾಬೂಜಿ ಜಯಂತಿ ಆಚರಿಸದಂತೆ ಆಗ್ರಹಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಡಗೈ ಸಮುದಾಯದ ಮುಖಂಡರು, ಈ ಹಿಂದಿನಿಂದಲೂ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಇಬ್ಬರು ನಾಯಕರ ಫೋಟೋ ಹಾಕಿಕೊಂಡಿಯೇ ಜಯಂತಿ ಆಚರಿಸಲಾಗುತ್ತಿದೆ. ಇಬ್ಬರು ನಾಯಕರು ಸಹ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಅಂಬೇಡ್ಕರ್ ಅವರು ಸಹ ನಮಗೆ ನಾಯಕರೇ ಹಾಗಾಗಿ ಇಬ್ಬರ ಫೋಟೋ ಇಟ್ಟು ಕಾರ್ಯಕ್ರಮ ನಡೆಸಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಎರಡು ಗುಂಪುಗಳ ಮುಖಂಡರು ಅಧಿಕಾರಿಗಳ ಸಮುಖದಲ್ಲಿಯೇ ವಾಗ್ವಾದ ನಡೆಸಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಕೋಮಲರನ್ನು ತರಾಟೆ ತೆಗೆದುಕೊಂಡು ಅವರ ವಿರುದ್ಧ ಆಕ್ರೋಶ ಹೊರಹಾಕಿದರು.ಇಂತಹ ಮಹಾನ್ ನಾಯಕರ ಜಯಂತಿಗಳಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಇಬ್ಬರ ಸಮುದಾಯದವರ ನಡುವೆ ಒಡೆದು ಆಳುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ನೇರೆಹೊಣೆ ಎಂದು ಕಿಡಿಕಾರಿದರು. ಬಳಿಕ ಬಲಗೈ ಸಮುದಾಯದ ಮುಖಂಡರು ಶ್ರೀರಂಗಪಟ್ಟಣ-ಜೇವರ್ಗಿ ರಸ್ತೆ ತಡೆದು ಅಧಿಕಾರಿಗಳ ವಿರುದ್ಧ ಘೋಷಣೆಕೂಗಿ ಆಕ್ರೋಶ ಹೊರ ಹಾಕಿದರು.
ಶಾಸಕ ದರ್ಶನ್‌ಪುಟ್ಟಣ್ಣಯ್ಯ ಗೈರು ಆಕ್ರೋಶ:ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದ ಹಿನ್ನೆಲೆಯಲ್ಲಿ ಕೆಲವು ಮುಖಂಡರು ಆಕ್ರೋಶ ಹೊರ ಹಾಕಿದರು. ಅಮೆರಿಕಾಕ್ಕೆ ತೆರಳಿರುವ ಶಾಸಕರು ಇಂತಹ ಮಹಾನ್ ನಾಯಕರ ಜಯಂತಿಗೂ ಗೈರಾಗಿದ್ದಾರೆ. ಶಾಸಕರು ಹಾಜರಿದ್ದರೆ ಎರಡು ಗುಂಪುಗಳನ್ನು ಸಮಾಧಾನಪಡಿಸಿ ಕಾರ್ಯಕ್ರಮ ಸುಗಮವಾಗಿ ನಡೆಸಬಹುದಾಗಿತ್ತು ಎಂದರು. ಜವಾಬ್ದಾರಿಯುತ ಶಾಸಕರೇ ಗೈರಾಗಿದ್ದರಿಂದಾಗಿ ಎರಡು ಸಮುದಾಯದ ಮುಖಂಡರನ್ನು ಸಮಾಧಾನಪಡಿಸಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಂದ ಸಾಧ್ಯವಾಗದೆ ರದ್ದುಗೊಳಿಸಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಅಂಬೇಡ್ಕರ್ ಜಯಂತಿಯಲ್ಲಿ ಬಾಬು ಜಗಜೀವನರಾಂ ಭಾವಚಿತ್ರ ಇಡುವ ಬಗ್ಗೆ ಸಮಾಜ ಕಲ್ಯಾಣಾಧಿಕಾರಿ ಕೋಮಲ ನನಗೆ ಮಾಹಿತಿ ನೀಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು, ಸಭೆಯನ್ನು ರದ್ದುಗೊಳಿಸಿ ಮುಂದೊಂದು ದಿನ ನಡೆಸಲಾಗುವುದು ಎಂದರು.