ವಸ್ತು ಪ್ರದರ್ಶನ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹಿರಿಯೂರು ನಗರಸಭೆ ಅನುಮತಿ ನೀಡಲು ಹೊರಟಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿರಿಯೂರಿನಲ್ಲಿ ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಲು ಅನಧಿಕೃತವಾಗಿ ಅನುಮತಿ ನೀಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದವರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಲು ಉಪ ವಿಭಾಗಾಧಿಕಾರಿ, ಹಿರಿಯೂರು ತಹಸೀಲ್ದಾರ್, ವಿದ್ಯುತ್ ಪರಿವೀಕ್ಷಕರು, ಬೆಸ್ಕಾಂ, ಹಿರಿಯೂರು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಪರಿಶೀಲನೆ ನಡೆಸುತ್ತಿದ್ದಾರೆ. ಹಿರಿಯೂರು ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ಸೇರಿಕೊಂಡು ಈ ಹಿಂದೆ ಅರ್ಜಿ ನೀಡಿ ಆರು ಇಲಾಖೆಗಳಿಂದ ಅನುಮತಿ ಪಡೆದಿರುವ ಸಂಸ್ಥೆಗೆ ಅನುಮತಿ ನೀಡದೆ ಗುರು ಎಂಟರ್ ಪ್ರೈಜಸ್ ನೀಡಿರುವ ಅರ್ಜಿ ಪರಿಗಣಿಸಿ ಅನುಮತಿ ನೀಡಲು ಮುಂದಾಗಿದ್ದಾರೆ. ನಗರಸಭೆ ನಡೆ ಪರಿಗಣಿಸಬಾರದೆಂದು ದಸಂಸ ಆಗ್ರಹಿಸಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಕೆ.ಮಂಜುನಾಥ್‌ ಹೆಗ್ಗೆರೆ, ಟಿ.ಗೋವಿಂದಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಟಿ.ಮಂಜುನಾಥ್, ಕಣುಮಪ್ಪ ಭರಮಗಿರಿ, ಸೂರನಹಳ್ಳಿ ಮಂಜುನಾಥ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.