ಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರ ಹುದ್ದೆ ನೇಮಕಕ್ಕೆ ಆಕ್ಷೇಪ

| Published : Jul 11 2024, 01:32 AM IST

ಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರ ಹುದ್ದೆ ನೇಮಕಕ್ಕೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ೩೧೦ ಪ್ರಾಂಶುಪಾಲರ ಹುದ್ದೆಗಳ ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆಯ ಮೂಲಕ, ಐದು ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ರಾಜ್ಯ ಸಮಿತಿ ವಿರೋಧಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದ್ದಾರೆ.

ಹಾವೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ೩೧೦ ಪ್ರಾಂಶುಪಾಲರ ಹುದ್ದೆಗಳ ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆಯ ಮೂಲಕ, ಐದು ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ್ದು, ರಾಜ್ಯದ ೪೩೪ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ೪೦೦ ಪ್ರಾಂಶುಪಾಲರ ಪೈಕಿ ೩೧೦ ಸ್ಥಾನಗಳಿಗೆ ಗುತ್ತಿಗೆ ಪದ್ಧತಿಯಡಿ ನೇಮಕ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಡಿವೈಎಫ್‌ಐ ಖಂಡಿಸುತ್ತದೆ. ಗುತ್ತಿಗೆ ಪದ್ಧತಿ ಬದಲಿಸಿ ಖಾಲಿಯಿರುವ ೪೦೦ ಪ್ರಾಂಶುಪಾಲರ ಹುದ್ದೆಗಳನ್ನು ಕಾಯಂ ಆಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳುವ ಸರ್ಕಾರ, ಈ ಅವಧಿ ಆನಂತರ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದರೆ ಅತಂತ್ರರಾಗುವ ಅವರು ಏನು ಕೆಲಸ ಮಾಡಬೇಕು? ಇದರಲ್ಲಿ ಸರ್ಕಾರಕ್ಕೆ ಹೊಣೆಗಾರಿಕೆ ಇಲ್ಲವೇ? ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿ ಬಳಸಿ ಬಿಸಾಡುವ ಜೀತ ಪದ್ಧತಿ ಸ್ವರೂಪದ ಕೆಲಸವನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಪಡಿಸಬೇಕು.

ಎಂಜಿನಿಯರಿಂಗ್ ಸೇರಿದಂತೆ ಇತರ ಪದವಿ ಕಾಲೇಜುಗಳಲ್ಲಿ ಹದಿನೈದು ವರ್ಷಗಳ ಬೋಧನಾನುಭವ ಹೊಂದಿರುವವರಿಗೆ ನೇಮಕಾತಿಯಲ್ಲಿ ಅವಕಾಶವಿದೆ. ಎಂಜಿನಿಯರಿಂಗ್ ಕಾಲೇಜು ಮತ್ತು ಇತರ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಆಯ್ಕೆಯಾದರೆ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಹೇಗೆ ಸಾಧ್ಯ? ತಾತ್ಕಾಲಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆ ಮಾಡುವುದರಿಂದ, ಆಯ್ಕೆಯಾದವರಿಗೆ ಸೇವಾ ಭದ್ರತೆ ಖಾತರಿಯೂ ಇಲ್ಲ. ಅಲ್ಲದೇ ವಿದ್ಯಾರ್ಥಿಗಳ ಪಾಠ, ಪ್ರವಚನಕ್ಕೆ ತೊಂದರೆಯಾಗುತ್ತದೆ.

ಸರ್ಕಾರ ನಿಗದಿಗೊಳಿಸಿರುವ ಹದಿನೈದು ವರ್ಷಗಳ ಸೇವಾನುಭವವಿಲ್ಲದವರೂ, ಹಲವರು ಪ್ರಭಾವ ಬಳಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹದಿನೈದು ವರ್ಷಗಳ ಸೇವಾ ದೃಢೀಕರಣ ಪಡೆದಿರುವ ವದಂತಿಗಳಿವೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು.

ಒಟ್ಟಾರೆಯಾಗಿ ಉನ್ನತ ಶಿಕ್ಷಣ, ಪಿಎಚ್‌ಡಿ ಪಡೆದು ಕೆಲಸ ಮಾಡಲು ಸಾಮರ್ಥ್ಯವಿರುವ ಲಕ್ಷಾಂತರ ಜನತೆಗೆ ಅವಕಾಶ ನೀಡಬೇಕು. ಸರ್ಕಾರ ಪರೀಕ್ಷಾ ಪ್ರಾಧಿಕಾರದ ಮೂಲಕ ಐದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರ ನೇಮಕ ಮಾಡಲು ಹೊರಟಿರುವುದನ್ನು ಕೂಡಲೇ ರದ್ದುಪಡಿಸಿ, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕಾಯಂ ನೇಮಕ ಮಾಡಿಕೊಳ್ಳಲು ಮುಂದಾಗಬೇಕು. ಇಲ್ಲವಾದರೆ ಡಿವೈಎಫ್‌ಐ ತೀವ್ರವಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.