ಪುರಸಭೆ ಸದಸ್ಯರಿಗೆ ತಿಳಿಸದೇ ವಾರ್ಡ್‌ಗಳಲ್ಲಿ ಕಾಮಗಾರಿಗೆ ಆಕ್ಷೇಪ

| Published : May 16 2025, 02:21 AM IST

ಪುರಸಭೆ ಸದಸ್ಯರಿಗೆ ತಿಳಿಸದೇ ವಾರ್ಡ್‌ಗಳಲ್ಲಿ ಕಾಮಗಾರಿಗೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ 2ನೇ ದಿನವಾದ ಗುರುವಾರವೂ ಮುಂದುವರಿದಿದ್ದು, ಅನೇಕ ವಿಷಯಗಳು ಚರ್ಚೆಯಾದವು.

- ಗುತ್ತಿಗೆ ನೌಕರರಿಂದ ಕಂದಾಯ ಹಣ ದುರುಪಯೋಗ: ಸದಸ್ಯ ಭೋವಿ ಶಿವು ಆರೋಪ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಪಟ್ಟಣದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ 2ನೇ ದಿನವಾದ ಗುರುವಾರವೂ ಮುಂದುವರಿದಿದ್ದು, ಅನೇಕ ವಿಷಯಗಳು ಚರ್ಚೆಯಾದವು.

ಸಭೆಯಲ್ಲಿ ಸದಸ್ಯ ಭೋವಿ ಶಿವು ಮಾತನಾಡಿ, ಸದಸ್ಯರಿಗೆ ತಿಳಿಸದೇ ಐದು ವಾರ್ಡ್‌ಗಳಲ್ಲಿ ಚಿಕ್ಕ ಕಾಮಗಾರಿಗಳಿಗೆ ಸುಮಾರು ₹೧೦ ಲಕ್ಷ ಖರ್ಚು ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕವಾದವರು ಕಂದಾಯ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ನಕಲಿ ರಸೀದಿ ಹಾಕಿದ್ದಾರೆಂದು. ಈ ಅವ್ಯವಸ್ಥೆಗಳಿಗೆ ಯಾವ ಅಧಿಕಾರಿಗಳು ಹೊಣೆ ಎಂದು ಪ್ರಶ್ನಿಸಿದರು.

ಸದಸ್ಯ ಕೆ.ಜಿ. ಲೋಕೇಶ್ ಮಾತನಾಡಿ, ಹೊಸ ಲೇಔಟ್ ನಿರ್ಮಾಣದಿಂದ ಪುರಸಭೆಗೆ ಕಂದಾಯ ಸಂಗ್ರಹವಾಗಲಿದೆ. ಹಾಗಾಗಿ, ವಿಳಂಬ ಮಾಡದೇ ಸಭೆಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ಸದಸ್ಯೆ ವಿಜಯಲಕ್ಷ್ಮೀ ಮಾತನಾಡಿ, ಖಾಸಗಿ ಅಕ್ಕಿ ಗಿರಣಿಯ ಭತ್ತದ ಧೂಳಿನಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರೆ, ಮತ್ತೋರ್ವ ಸದಸ್ಯ ರೇವಣಸಿದ್ದೇಶ್ ನಿಟ್ಟೂರು ರಸ್ತೆಯಲ್ಲಿಯೂ ಖಾಸಗಿ ಉದ್ದಿಮೆದಾರರು ರಸ್ತೆ ಪಕ್ಕದಲ್ಲಿ ಬೂದಿ ಹಾಕುತ್ತಾರೆ. ಗಾಳಿಗೆ ಧೂಳು ಪಾದಚಾರಿಗಳು, ವಾಹನ ಸವಾರರಿಗೆ ಅನಾರೋಗ್ಯ ಉಂಟುಮಾಡುತ್ತಿದೆ ಎಂದು ಸಭೆಗೆ ತಿಳಿಸಿದರು.

ವಿಷಯ ಆಲಿಸಿದ ಪರಿಸರ ಅಭಿಯಂತರ ಉಮೇಶ್ ಅವರು, ಈ ಬಗ್ಗೆ ಪುರಸಭೆಯಿಂದ ನೋಟಿಸ್ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ಪತ್ರ ಬರೆಯಲಾಗಿದೆ. ಅವರು ಸ್ಥಳ ವೀಕ್ಷಣೆ ಮಾಡುವರು ಎಂದರು.

ಸದಸ್ಯರಾದ ಮಂಜಣ್ಣ ಮತ್ತು ಶಬ್ಬೀರ್ ಮಾತನಾಡಿ, ನಾವು ಇ-ಸ್ವತ್ತಿಗಾಗಿ ಬಡವರಿಂದ ನೀಡಿದ ಅರ್ಜಿಗಳು ನಾಪತ್ತೆಯಾಗಿವೆ. ಮೂಲ ದಾಖಲೆಗಳು ಕಳೆದಿವೆ ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ, ಸಭೆಗೆ ಉತ್ತರ ಕೊಡಿ ಎಂದು ಪಟ್ಟುಹಿಡಿದರು.

ಮುಖ್ಯಾಧಿಕಾರಿ ಹನುಮಂತಪ್ಪ ಎನ್. ಭಜಕ್ಕನವರ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಕಾಮಗಾರಿ ನಡೆಸಲು ಪುರಸಭಾ ಕಾಯ್ದೆ ಅನ್ವಯ ಅವಕಾಶವಿದೆ. ಹಾಗಾಗಿ ಹಣ ಖರ್ಚು ಮಾಡಿದ್ದೇವೆ. ಈ ವಿಷಯದಲ್ಲಿ ಯಾವೊಬ್ಬ ಅಧಿಕಾರಿಯೂ ತಪ್ಪು ಮಾಡಿಲ್ಲ ಎಂದರು.

ಕಡತ ನಾಪತ್ತೆ ಪ್ರಕರಣಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಕಚೇರಿಯ ೧೨ ಕಡತಗಳು ನಾಪ್ತತೆ ಆಗಿರುವ ಮಾಹಿತಿ ಇದೆ. ಕರ ಸಂಗ್ರಹಗಾರ ಪರಶುರಾಮ್ ಎಂಬವರಿಗೆ ಕಿವಿ ಕೇಳಿಸಲ್ಲ. ಗ್ರಾಹಕರು ಹೇಳೋದು ಒಂದು, ಕೇಳಿಸೋದು ಮತ್ತೊಂದು ಆಗಿದೆ. ಶಿಸ್ತುಬದ್ಧವಾಗಿ ಕರ್ತವ್ಯ ಮಾಡಲು ಎಚ್ಚರಿಕೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಸದಸ್ಯರಾದ ನಯಾಜ್, ಅರೀಫ್‌ಅಲಿ, ಖಲೀಲ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ಅವರ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಮಾತನಾಡಿದರು.

- - -

-೧೫ಎಂಬಿಆರ್೧: ಮಲೇಬೆನ್ನೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ ನಡೆಯಿತು.