ಅಯೋಧ್ಯೆ ರೈಲಿನಲ್ಲಿ ಆಕ್ಷೇಪಾರ್ಹ ಹೇಳಿಕೆ: ರೈಲು ತಡೆದು ಭಕ್ತರ ಪ್ರತಿಭಟನೆ

| Published : Feb 23 2024, 01:45 AM IST

ಅಯೋಧ್ಯೆ ರೈಲಿನಲ್ಲಿ ಆಕ್ಷೇಪಾರ್ಹ ಹೇಳಿಕೆ: ರೈಲು ತಡೆದು ಭಕ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈಲಿನ ಕುರಿತು ಅವಹೇಳನಕಾರಿ ಪದ ಬಳಸಿದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾನಿರತ ಭಕ್ತಾದಿಗಳು ಒತ್ತಾಯಿಸಿದರು.

ಹೊಸಪೇಟೆ: ಮೈಸೂರಿನಿಂದ ಅಯೋಧ್ಯಾ ಧಾಮಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಅನ್ಯ ಕೋಮಿನ ಯುವಕನೋರ್ವ ಆಕ್ಷೇಪಾರ್ಹ ಪದ ಬಳಸಿ ಘೋಷಣೆ ಕೂಗಿ ಹೊಸಪೇಟೆ ರೈಲು ನಿಲ್ದಾಣದಲ್ಲಿ ಇಳಿದು ಹೋದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಭಕ್ತರು ಗುರುವಾರ ರಾತ್ರಿ ಹೊಸಪೇಟೆಯಲ್ಲಿ ರೈಲನ್ನು ಸುಮಾರು 2 ಗಂಟೆಗಳ ಕಾಲ ನಿಲ್ಲಿಸಿ ಪ್ರತಿಭಟಿಸಿದರಲ್ಲದೇ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಘಟನೆಯಿಂದ ರೈಲು ನಿಲ್ದಾಣದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಹಾಗೂ ಇನ್ನಿತರ ಪೊಲೀಸ್‌ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ಬಳಿಕ ಎರಡು ತಾಸು ತಡವಾಗಿ ರೈಲು ಚಲಿಸಿದೆ. ಮುಂಜಾಗ್ರತಾ ಕ್ರಮವಾಗಿ ರೈಲಿನ ಜೊತೆ ಸ್ಥಳೀಯ ಪೊಲೀಸರೂ ತೆರಳಿದ್ದು, ಪ್ರಯಾಣಿಕ ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ.ರೈಲಿನ ಕುರಿತು ಅವಹೇಳನಕಾರಿ ಪದ ಬಳಸಿದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾನಿರತ ಭಕ್ತಾದಿಗಳು ಒತ್ತಾಯಿಸಿದರು. ಅಲ್ಲದೇ ಹೊಸಪೇಟೆಯ ರೈಲು ನಿಲ್ದಾಣದಲ್ಲಿ ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಸತತ 11ನೇ ಬಾರಿ ಈ ರೈಲು ಅಯೋಧ್ಯೆಗೆ ತೆರಳುತ್ತಿದೆ. ಆದರೆ ಗುರುವಾರ ಮಾತ್ರ ಇಂಥ ಘಟನೆ ನಡೆದಿದೆ. ಕೂಡಲೇ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಮಾಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರತಿಭಟನಾನಿರತರನ್ನು ಮನವೊಲಿಸಿದ್ದಾರೆ. ಅಲ್ಲದೇ ರಾತ್ರಿ 8.20ಕ್ಕೆ ಆಗಮಿಸಿದ್ದ ರೈಲು 2 ತಾಸು ಅಲ್ಲಿಯೇ ನಿಂತಿತ್ತು. ಬಳಿಕ ಪೊಲೀಸರ ಮನವೊಲಿಕೆಯ ಬಳಿಕ ರೈಲು ಪ್ರಯಾಣ ಮುಂದುವರಿದೆ.ಘಟನೆಗೆ ಮೂಲ ಕಾರಣ ಅನ್ಯಕೋಮಿನ ಯುವಕನೋರ್ವ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಎಂದು ಮೇಲ್ನೋಟಕ್ಕೆ ವಿಷಯ ತಿಳಿದುಬಂದಿದೆ. ಆತ ಎಲ್ಲಿ ಹೋದ, ಯಾರು ಎಂಬ ಮಾಹಿತಿ ತಿಳಿದು ಬಂದಿಲ್ಲ.