ಶ್ರಾವಣ ಮಾಸದ ಎರಡನೇ ಶುಕ್ರವಾರ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ವ್ರತವನ್ನು ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಸಿರವಾರ
ಶ್ರಾವಣ ಮಾಸದ ಎರಡನೇ ಶುಕ್ರವಾರ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ವ್ರತವನ್ನು ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಬಡವ ಬಲ್ಲಿದರೆನ್ನದೇ ಪ್ರತಿಮನೆಯಲ್ಲೂ ಮಹಿಳೆಯರು ಮಹಾಲಕ್ಷ್ಮಿ ಮೂರ್ತಿಯನ್ನು ಹೂವು, ಬಳೆ, ಕುಂಕುಮದಿಂದ ಶೃಂಗರಿಸಿ ಪೂಜೆ ಸಲ್ಲಿಸಿದರು. ಮಾವಿನ ಎಲೆ, ಬಾಳೆ ಎಲೆ, ಹೂವಿನ ತೋರಣದಿಂದ ಮಂಟಪ ನಿರ್ಮಿಸಿ, ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ ದೇವಿಗೆ ನೈವೇದ್ಯ ಅರ್ಪಿಸಿದರು.
ಪೂಜೆಯ ಬಳಿಕ ನೆರೆಹೊರೆಯ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ-ಕುಂಕುಮ ನೀಡಿ ಪ್ರಸಾದ ವಿತರಿಸುವ ಮೂಲಕ ಸಂಭ್ರಮ ಹಂಚಿಕೊಂಡರು.ಅಷ್ಟಲಕ್ಷ್ಮಿಯರಲ್ಲಿ ಒಬ್ಬಳಾದ ವರಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ದೀರ್ಘ ಸುಮಂಗಲ್ಯ, ಐಶ್ವರ್ಯ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ ಸ್ಕಂದ ಪುರಾಣದ ಪ್ರಕಾರ ಮಗಧ ದೇಶದ ಚಾರುಮತಿ ಎಂಬುವರಿಗೆ ದೇವಿಯೇ ಕನಸಿನಲ್ಲಿ ದರ್ಶನ ನೀಡಿ ಈ ವ್ರತದ ಮಹಿಮೆ ತಿಳಿಸಿದ್ದಳು ಎಂದು ಅರ್ಚಕ ಚನ್ನಯ್ಯ ಶಾಖಾಪೂರು ತಿಳಿಸಿದರು. ಹಬ್ಬದ ನಿಮಿತ್ತ ಪಟ್ಟಣದ ಮಾರುಕಟ್ಟೆಯಲ್ಲಿ ಬೆಳಗ್ಗಿನಿಂದಲೇ ಹೂವು, ಹಣ್ಣು, ತೆಂಗಿನಕಾಯಿ, ಬಳೆ, ಕುಂಕುಮ, ಅರಿಶಿನದ ವ್ಯಾಪಾರ ಜೋರಾಗಿತ್ತು, ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ದೇವಿಯ ದರ್ಶನ ಪಡೆದರು.