ರೈತ ಹಿತರಕ್ಷಣಾ ಸದಸ್ಯರಿಂದ ವಿಸಿ ನಾಲಾ ಕಾಮಗಾರಿ ವೀಕ್ಷಣೆ

| Published : Jun 23 2024, 02:05 AM IST

ಸಾರಾಂಶ

ಪಾಂಡವಪುರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ವಿ.ಸಿ.ನಾಲಾ ಆಧುನೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ತಾಲೂಕಿನಲ್ಲಿ ನಡೆಯುತ್ತಿರುವ ವಿಸಿ ನಾಲೆ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುನಂದಾ ಜಯರಾಂ ನೇತೃತ್ವದಲ್ಲಿ ಭೇಟಿಕೊಟ್ಟು ಕೆಆರ್‌ಎಸ್ ಅಣೆಕಟ್ಟೆಯ ಶೂನ್ಯ ಬಿಂದುವಿನಿಂದ ವೀಕ್ಷಣೆ ಪ್ರಾರಂಭಿಸಿದ ಸಮಿತಿ ಸದಸ್ಯರು, ಕಾಮಗಾರಿಯ ಗುಣಮಟ್ಟ, ಆಧುನೀಕರಣದ ಬಳಿಕ ನಾಲಾ ಕೊನೆ ಭಾಗದ ರೈತರಿಗೆ ನೀರಿನ ಲಭ್ಯತೆಯ ಪ್ರಮಾಣ ಕುರಿತು ಮಾಹಿತಿ ಪಡೆದರು.

ಕಾಮಗಾರಿಯಿಂದ ರೈತರಿಗಾಗುವ ಪ್ರಯೋಜನಗಳು, ಸದ್ಯ ಕಾಮಗಾರಿ ಎಷ್ಟು ಕಿ.ಮೀ ಪೂರ್ಣಗೊಳಿಸಲಾಗಿದೆ. ಉಳಿಕೆ ಕಾಮಗಾರಿಯ ವಿವರ, ಉಪನಾಲೆಗಳು ಮತ್ತು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಕೈಗೊಳ್ಳಲಾಗಿರುವ ಯೋಜನೆಗಳು, ತೂಬುಗಳ ನಿರ್ಮಾಣದ ವಿವರ ಸೇರಿ ಅನೇಕ ವಿಚಾರಗಳ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಅಲ್ಲದೇ ಮುಂಗಾರು ಹಂಗಾಮಿಗೆ ರೈತರ ಬೆಳೆಗಳಿಗೆ ನೀರು ಹರಿಸಬೇಕಿದೆ. ಅಷ್ಟರೊಳಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಅಣೆಕಟ್ಟೆ ಶೂನ್ಯ ಬಿಂದುವಿನ ಬಳಿ ಕಾಮಗಾರಿಗೆ ಆದ್ಯತೆ ನೀಡಬೇಕು. ಕಟ್ಟೆಯಿಂದ ನೀರು ಹರಿಸಿದ ಬಳಿಕ ಈ ಸ್ಥಳದಲ್ಲಿ ಲಿಕೇಜ್ ನೀರು ಸ್ಥಗಿತವಾಗಲ್ಲ. ಹೀಗಾಗಿ ಇಲ್ಲಿನ ಕಾಮಗಾರಿ ಮೊದಲು ಮುಗಿಸುವಂತೆ ಸಲಹೆ ನೀಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, 330 ಕೋಟಿ ವೆಚ್ಚದಲ್ಲಿ 46.2 ಕಿ.ಮೀ ನಾಲಾ ಆಧುನೀಕರಣ ಕಾಮಗಾರಿಯಲ್ಲಿ 26 ಕಿ.ಮೀ ಮುಗಿದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಂತೆ ಇನ್ನೂ 20 ಕಿ.ಮೀ ಲೈನಿಂಗ್ ಕೆಲಸ ಆಗಬೇಕಿದೆ ಎಂದರು.

ಕಾಮಗಾರಿ ಶೀಘ್ರ ಮುಗಿಸಿ:

ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ರೈತ ಹಿತರಕ್ಷಣಾ ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಜತೆಗೆ ಕಾಮಗಾರಿ ಗುಣಮಟ್ಟವನ್ನು ಪರಿಶೀಲನೆ ನಡೆಸಿದ್ದು, ಕಾಮಗಾರಿ ಗುಣಮಟ್ಟದಲ್ಲಿ ಅಧಿಕಾರಿಗಳು ರಾಜಿ ಆಗಬಾರದು ಎಂದು ಎಚ್ಚರಿಕೆ ನೀಡಿದ್ದೇವೆ. ಇನ್ನೂ 15 ದಿನಗಳೊಳಗೆ ನಾಲೆಗೆ ನೀರು ಹರಿಯುವ ಪರಿಣಾಮ ಗುತ್ತಿಗೆದಾರ ಸಂಸ್ಥೆ ಯುದ್ದೋಪಾದಿಯಲ್ಲಿ ಕಾಮಗಾರಿಯನ್ನು ಮುಗಿಸಬೇಕಿದೆ ಎಂದು ಹೇಳಿದರು.ಕಾಮಗಾರಿಯಲ್ಲಿ ಸಣ್ಣಪುಟ್ಟ ಲೋಪದೋಷಗಳು ಕಂಡು ಬಂದಿತ್ತು ಅದನ್ನು ಸರಿ ಮಾಡಿದ್ದಾರೆ. ಕಳೆದ 10 ತಿಂಗಳಿನಿಂದ ನಾಲೆಗೆ ನೀರು ಹರಿಯದ ಪರಿಣಾಮ ರೈತರು ಒಂದು ಹಂಗಾಮಿನ ಬೆಳೆ ಕಳೆದುಕೊಂಡಿದ್ದಾರೆ. ಹೀಗಾಗಿ ನಾಲೆಗೆ ನೀರು ಹರಿಸಲೇ ಬೇಕು. ನಾಲಾ ಆಧುನೀಕರಣದಿಂದ ಮದ್ದೂರು, ಮಳವಳ್ಳಿ ಭಾಗದ ರೈತರಿಗೂ ನೀರು ದೊರಕಲಿದೆ. ನಾಲಾ ಲೈನಿಂಗ್‌ನಿಂದ2 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗಲಿದೆ ಎಂದರು.

ತಾಲೂಕಿನ ಚಿಕ್ಕಾಯಾರಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ರೈತನಾಯಕಿ ಸುನಂದಾ ಜಯರಾಂ ಮಾತನಾಡಿ, ಐದು ವರ್ಷಗಳ ಹಿಂದೆ ಈ ಯೋಜನೆಗೆ ಸರ್ಕಾರ ಅನುಮತಿ ನೀಡಿತ್ತು. ನಾನಾ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗಿರಲಿಲ್ಲ. ಅಧಿಕಾರಿಗಳು ಕಾಮಗಾರಿ ಅಪೂರ್ಣತೆ ಬಗ್ಗೆ ಕಾರಣಗಳು ನಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವೇಗವಾಗಿ ಕಾಮಗಾರಿ ಪೂರೈಸಬೇಕಿತ್ತು. ಗುಣಮಟ್ಟದ ಬಗ್ಗ ಸ್ವಲ್ಪ ಸಮಾಧಾನವಿದೆಯಾದರೂ ನಮ್ಮ ನಿರೀಕ್ಷೆಗೆ ತಕ್ಕಂತೆ ಆಗಿಲ್ಲ. ನಾಲಾ ಆಧುನೀಕರಣ ಕಾಮಗಾರಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಸರ್ಕಾರದ ಗಮನಕ್ಕೆ ತರಲು ರೈತ ಹಿತರಕ್ಷಣಾ ಸಮಿತಿ ಸದಸ್ಯರು ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದೇವೆ. ಈ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

ಈ ವೇಳೆ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಮು, ಎಇ ಸಹನಾ, ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಜಯ ಕರ್ನಾಟಕ ಸಂಘಟನೆ ನಾರಾಯಣ್, ಅರಕೆರೆ ಸೋಮಣ್ಣ, ತುಳಸಿಧರ, ಮಲ್ಲಿಗೆರೆ ಎಂ.ವಿ.ಕೃಷ್ಣ, ಮುದ್ದೆಗೌಡ, ನಾಗೇಂದ್ರ, ಬೋರಲಿಂಗೇಗೌಡ, ಬಸವರಾಜು, ಸತ್ಯಭಾಮ, ತಾಯಮ್ಮ ಇತರರು ಇದ್ದರು.