ಕಲಿಕೆಯಲ್ಲಿ ಕೇಳುವಿಕೆಗಿಂತ ಗಮನಿಸುವಿಕೆ ಮುಖ್ಯ

| Published : May 27 2024, 01:00 AM IST

ಸಾರಾಂಶ

ದಾಬಸ್‌ಪೇಟೆ: ಮಾನವ ಜೀವನದಲ್ಲಿ ಗಳಿಸುವ ಎಲ್ಲಾ ಸಂಪತ್ತಿಗಿಂತ ಜ್ಞಾನ ಸಂಪತ್ತು ಪ್ರಮುಖವಾದುದು ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಸಾಹಿತಿ ಎಂ.ವಿ.ನೆಗಳೂರು ತಿಳಿಸಿದರು.

ದಾಬಸ್‌ಪೇಟೆ: ಮಾನವ ಜೀವನದಲ್ಲಿ ಗಳಿಸುವ ಎಲ್ಲಾ ಸಂಪತ್ತಿಗಿಂತ ಜ್ಞಾನ ಸಂಪತ್ತು ಪ್ರಮುಖವಾದುದು ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಸಾಹಿತಿ ಎಂ.ವಿ.ನೆಗಳೂರು ತಿಳಿಸಿದರು.

ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಾಗೇಪಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನದ ಕಲಿಕೆ ಮತ್ತು ಕಲಿಸುವಿಕೆ ಸಮಾಜದಲ್ಲಿ ಬದಲಾವಣೆಯನ್ನು ತರುವಂತಹದಾಗಿರಬೇಕು. ಕಲಿಕೆಯಲ್ಲಿ ಕೇಳುವಿಕೆಗಿಂತ ಗಮನಿಸುವಿಕೆ ತುಂಬಾ ಮುಖ್ಯವಾಗುತ್ತದೆ. ಕಾಲೇಜು ದಿನಗಳಲ್ಲಿ ನಡೆ ನುಡಿಯ ಬಗ್ಗೆ ಆಸಕ್ತಿ ಹಾಗೂ ಮನಸ್ಸಿಟ್ಟು ಕಲಿಯಬೇಕು. ವ್ಯಾಸಂಗದ ಅವಧಿಯನ್ನು ವ್ಯರ್ಥ ಮಾಡದೆ ಕಲಿಕೆಗೆ ಒತ್ತು ನೀಡಬೇಕು. ಮುಂದಿನ ಭವಿಷ್ಯ ಉಜ್ವಲವಾಗಿರಬೇಕೆಂದರೆ ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು ಎಂದು ಹೇಳಿದರು.

ಕನ್ನಡ ಭಾಷೆಯ ಒಂದು ಪದದಲ್ಲಿ ನೂರಾರು ಪದಗಳನ್ನು ಕಟ್ಟಬಹುದು ಹಾಗೂ ನೂರಾರು ಸಮಾನ ಪದಗಳನ್ನು ಕಾಣಬಹುದು. ಇದು ನಮ್ಮ ಭಾಷೆಗಿರುವ ಶಕ್ತಿ. ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಮಾತೃ ಭಾಷೆಯನ್ನು ಅಭಿಮಾನದಿಂದ ಮಾತನಾಡಬೇಕು. ಮಾತೃ ಭಾಷೆಯನ್ನು ಗೌರವಿಸಬೇಕು. ಪ್ರೀತಿಸಬೇಕು. ಅದನ್ನು ಇತರರಿಗೂ ಕಲಿಸಬೇಕು ಎಂದು ಹೇಳಿದರು.

ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥಾಪಕ ಓಂಕಾರ ಪ್ರಿಯ ಮಾತನಾಡಿ, ಕನ್ನಡ ಭಾಷೆ ಪದಗಳ ಸಂಪತ್ತಿನ ಶ್ರೀಮಂತಿಕೆಯಿಂದ ಕೂಡಿದೆ. ಅದರ ಪರಿಪೂರ್ಣ ಕಲಿಕೆ ಮತ್ತು ಬಳಕೆಯ ಅನಿರ್ವಾಯದ ಕಾಲಘಟ್ಟದಲ್ಲಿ ನಾವುಗಳಿದ್ದೇವೆ. ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಯಾವುದೇ ಭಾಷೆಯಾದರೂ ಗೌರವಿಸಬೇಕು. ಆಗಲೇ ನಾವು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ತಿಮ್ಮಹನುಮಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಮಾತೃ ಭಾಷೆಯ ಪರಿಪೂರ್ಣ ಕಲಿಕೆ ಅನಿರ್ವಾಯವಾಗಿದೆ. ಕನ್ನಡ ಭಾಷೆ ವಿಶ್ವದ ಎಲ್ಲಾ ಭಾಷೆಗಳಿಗಿಂತ ವೈವಿಧ್ಯಮಯವಾಗಿದೆ. ಕನ್ನಡಿಗರೇ ಭಾಷೆ ಬಳಕೆಯಲ್ಲಿ ಹಿಂದೇಟು ಹಾಕುವುದು ದುರಂತ. ಮೊದಲು ಮಾತೃಭಾಷೆಯನ್ನು ಗೌರವಿಸಬೇಕು. ಮನೆಯಲ್ಲಿ ಮಕ್ಕಳಿಗೆ ಮಾತೃಭಾಷೆ ಕಲಿಸಬೇಕು. ಇತರೆ ಭಾಷೆಗಳನ್ನು ಮುಂದೆ ಕಲಿಯಬಹುದು. ಆದರೆ, ಮೊದಲು ಮಾತೃಭಾಷೆ ಕಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಪ್ರೊ.ಅರವಿಂದ್, ಕಾಲೇಜಿನ ಉಪನ್ಯಾಸಕರಾದ ಪ್ರೊ.ತಾರಮಣಿ, ಡಾ.ರತ್ನಮ್ಮ, ಮಂಜುನಾಥ್, ದಿವಾಕರ್, ಸಾಯಿಪ್ರಸಾದ್, ಆನಂದ್, ಲಕ್ಷ್ಮೀನರಸಿಂಹಯ್ಯ, ಮಹದೇವಯ್ಯ ಮತ್ತಿತರರು ಭಾಗವಹಿಸಿದ್ದರು.ಪೋಟೋ 14 : ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಾಗೇಪಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಮ್ಮಟವನ್ನು ನಿವೃತ್ತ ಉಪನಿರ್ದೇಶಕರು ಹಾಗೂ ಸಾಹಿತಿ ಎಂ.ವಿ. ನೆಗಳೂರು ಉದ್ಘಾಟಿಸಿದರು.