ಜಮೀನಿನಲ್ಲಿ ಉಳುಮೆ ಮಾಡಲು ಅಡ್ಡಿ: ತಾಲೂಕು ಕಚೇರಿ ಎದುರು ವಿಧವೆ ಮಹಿಳೆ ಧರಣಿ

| Published : Oct 30 2025, 01:30 AM IST

ಜಮೀನಿನಲ್ಲಿ ಉಳುಮೆ ಮಾಡಲು ಅಡ್ಡಿ: ತಾಲೂಕು ಕಚೇರಿ ಎದುರು ವಿಧವೆ ಮಹಿಳೆ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಲಯದ ಆದೇಶವಿದ್ದರೂ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಪ್ರಭಾವಿ ವ್ಯಕ್ತಿಗಳು ಅಡ್ಡಿ ಪಡಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ನ್ಯಾಯಾಲಯದ ಆದೇಶವಿದ್ದರೂ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಪ್ರಭಾವಿ ವ್ಯಕ್ತಿಗಳು ಅಡ್ಡಿ ಪಡಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ ದಲಿತ ವಿಧವೆ ಮಹಿಳೆ ತನ್ನ ಪುತ್ರನೊಂದಿಗೆ ಪಟ್ಟಣದ ತಾಲೂಕು ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ತಾಲೂಕಿನ ಆತಗೂರು ಹೋಬಳಿ ದುಂಡನಹಳ್ಳಿ ವ್ಯಾಪ್ತಿಯ ಸರ್ವೇ ನಂ.442ರಲ್ಲಿ ಇರುವ 4.35 ಉಳುಮೆ ಮಾಡಲು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯ, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ನ್ಯಾಯಾಲಯಗಳಲ್ಲಿ ಜಮೀನಿನ ಬಗ್ಗೆ ವಿಚಾರಣೆ ನಡೆದು ಅಂತಿಮವಾಗಿ ನಮ್ಮ ಪರವಾಗಿ ತೀರ್ಪು ನೀಡಿವೆ.

ಆದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಅಕ್ಕ ಪಕ್ಕದ ಜಮೀನಿನ ಮಾಲೀಕರಾದ ಚಾಮಲಾಪುರ ಗೋವಿಂದ, ತಿಮ್ಮೇಗೌಡ, ಮಾಯಿಗಯ್ಯ ಹಾಗೂ ನಾರಾಯಣ ಎಂಬುವವರೊಂದಿಗೆ ಶಾಮೀಲಾಗಿ ಜಮೀನಿನ ಉಳುಮೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ನಮ್ಮ ಮೇಲೆ ನಡೆಯುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ಈ ಸಂಬಂಧ ಜಮೀನು ದಾಖಲೆಗಳನ್ನು ಪರಿಶೀಲನೆ ಮಾಡಿ ಆರ್ ಟಿ ಸಿ ಮತ್ತು ಇತರ ದಾಖಲೆಗಳನ್ನು ದೊರಕಿಸಿ ಕೊಡುವ ಮೂಲಕ ಪ್ರಭಾವಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಅವಕಾಶ ಕಲ್ಪಿಸುವಂತೆ ಮರಿಯಮ್ಮ ಆಗ್ರಹಿಸಿದರು.

ಆಕಸ್ಮಿಕ ಬೆಂಕಿ ಸಾರ್ವಜನಿಕರಲ್ಲಿ ಆತಂಕ

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಕಾವೇರಿ ನೀರಾವರಿ ನಿಗಮದ ಕಚೇರಿ ಕಾಂಪೌಂಡ್ ಬಳಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ ಫಾರಂ ಕೆಳಗೆ ಬುಧವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿ ಶಿವಾನಂದಯ್ಯ ಹಾಗೂ ಸಿಬ್ಬಂದಿ ಬೆಂಕಿ ನಂದಿಸಿ ಬೆಂಕಿ ಅನಾಹುತದಲ್ಲಿ ಸಿಲುಕಲಿದ್ದ 7 ಅಂಗಡಿಗಳನ್ನು ರಕ್ಷಣೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಅಧಿಕಾರಿಗಳ ವಸತಿ ಗೃಹಗಳ ಮುಂಭಾಗದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಪೆಟ್ಟಿಗೆ ಅಂಗಡಿಗಳಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳು ಬೀಡಿ ಅಥವಾ ಸಿಗರೇಟು ಸೇರಿ ಬಿಸಾಡಿದ ಬೆಂಕಿ ಕಿಡಿ ಅಂಗಡಿಗಳ ಹಿಂಭಾಗದಲ್ಲಿದ್ದ ಘನ ತ್ಯಾಜ್ಯ ವಸ್ತುಗಳಿಗೆ ತಾಗಿ ಬೆಂಕಿ ಉದ್ಭವಾಗಿರಬಹುದೆಂದು ಸೆಸ್ಕಾಂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.