ಕನ್ನಡಪ್ರಭ ವಾರ್ತೆ ಸಿರಿಗೆರೆ

ಮುಸ್ಲಿಂ ಬಾಂಧವರು ಮಾತ್ರವೇ ವಾಸ ಮಾಡುತ್ತಿರುವ ಗೌರಮ್ಮನಹಳ್ಳಿ ಗ್ರಾಮಕ್ಕೆ ದೂರದ ವಾಣಿ ವಿಲಾಸ ಸಾಗರದಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದೆಂದು ಶಾಸಕ ಡಾ. ಎಂ. ಚಂದ್ರಪ್ಪ ಭರವಸೆ ನೀಡಿದರು.

ಸಿರಿಗೆರೆ ಸಮೀಪದ ಗೌರಮ್ಮನಳ್ಳಿ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ಮಾಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಗ್ರಾಮದ ಮುಖಂಡರ ಬೇಡಿಕೆಯಂತೆ ಸೂಳೆಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸಲಾಗಿದೆ. ವಾಣಿವಿಲಾಸ ಸಾಗರದಿಂದ ಬರುವ ಶುದ್ಧ ನೀರನ್ನು ಗ್ರಾಮದ ಎಲ್ಲಾ ಮನೆಗಳಿಗೂ ನೀಡುವ ಯೋಜನೆ ಇದೆ. ಅದನ್ನು ಮಾಡಲಾಗುವುದು ಎಂದರು.

೩೨ ವರ್ಷಗಳ ನನ್ನ ರಾಜಕೀಯ ಬದುಕಿನಲ್ಲಿ ಯಾವ ಸಮುದಾಯಗಳನ್ನೂ ಭಿನ್ನವಾಗಿ ನೋಡಿಲ್ಲ. ನನಗೆ ಎಲ್ಲರೂ ಒಂದೇ, ಒಂದು ಕುಟುಂಬದ ಸದಸ್ಯರಂತೆಯೇ ಬದುಕಿ ಬಾಳಬೇಕು ಎನ್ನುವುದು ನನ್ನ ಅಪೇಕ್ಷೆ. ಹಾಗಾಗಿ ಕ್ಷೇತ್ರದ ಎಲ್ಲಾ ಹಳ್ಳಿಗಳ ಅಭಿವೃದ್ಧಿಯೂ ಚಾಲನೆ ನೀಡಿರುವೆ ಎಂದರು.


ನಾನು ಮೊದಲ ಬಾರಿಗೆ ಗೌರಮ್ಮನಹಳ್ಳಿಗೆ ಬಂದಿದ್ದಾಗ ಊರ ಸಮೀಪದ ಹೊಂಡದಲ್ಲಿ ಇಡೀ ಗ್ರಾಮದ ತ್ಯಾಜ್ಯವೇ ತುಂಬಿತ್ತು. ಈಗ ಅದೇ ಹೊಂಡದಲ್ಲಿ ಶುದ್ಧವಾದ ನೀರು ತುಂಬಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಈ ಗೋಕಟ್ಟೆಯಲ್ಲಿ ೧ ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದರು.

ಗೌರಮ್ಮನಹಳ್ಳಿಗೆ ಶಾಲೆ, ಅಂಗನವಾಡಿಯನ್ನು ಮಂಜೂರು ಮಾಡಿಸಿದ್ದೇನೆ. ಓವರ್‍ಹೆಡ್ ಟ್ಯಾಂಕ್ ಕಟ್ಟಿಸಲಾಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ ಎಂದರು.

ಗೌರಮ್ಮನಹಳ್ಳಿಯ ಇಸಾಕ್‍ಬೇಗ್ ಮಾತನಾಡಿ, ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪನವರೆಂದರೆ ನಮ್ಮ ಗ್ರಾಮದ ಚಿಕ್ಕಮಕ್ಕಳಿಗೂ ಗೊತ್ತಿದೆ. ಏಕೆಂದರೆ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು ಗೌರಮ್ಮನಹಳ್ಳಿ ಗ್ರಾಮಸ್ಥರಲ್ಲಿ ಶಾಶ್ವತವಾಗಿ ಉಳಿದಿದೆ. ನಾವುಗಳು ಕೇಳಿದ ಯಾವ ಕೆಲಸವನ್ನು ಆಗಲ್ಲ ಅಂತ ಎಂದಿಗೂ ಹೇಳಿಲ್ಲ. ಇಲ್ಲಿಯವರೆಗೂ ಯಾವ ಶಾಸಕರು ಮಾಡದಂತ ಅಭಿವೃದ್ದಿ ಕೆಲಸಗಳು ಇವರಿಂದ ಆಗಿದೆ. ಮುಂದೆ ಬರುವ ಚುನಾವಣೆಯಲ್ಲಿ ಇವರಿಗೆ ಮತ ನೀಡಿ ಉಳಿಸಿಕೊಳ್ಳೋಣ ಎಂದು ಗೌರಮ್ಮನಹಳ್ಳಿ ಗ್ರಾಮಸ್ಥರಲ್ಲಿ ವಿನಂತಿಸಿದರು.

ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಪರ್ವಿಜ್‍ಬೇಗ್, ಸೈಯದ್, ಸಮೀವುಲ್ಲಾಖಾನ್, ಮುಸ್ತಾಕ್‍ಬೇಗ್, ಸಲ್ಲಾಂಬೇಗ್, ಇಬ್ರಾಹಿಂಬೇಗ್, ಹಿರೆಬೆನ್ನೂರು ರಾಜಣ್ಣ, ಕೊಟ್ರೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ಮುಖಂಡರು ಹಾಜರಿದ್ದರು.‌

ಶಾಸಕರ ಕೆಲಸಕ್ಕೆ ಮುಸ್ಲಿಂ ಬಾಂಧವರ ಸಂತಸ

ಸಾಮಾನ್ಯವಾಗಿ ಬಿಜೆಪಿ ಶಾಸಕರೆಂದರೆ ಮೂಗು ಮುರಿಯುವ ಮುಸ್ಲಿಂ ಬಾಂಧವರು, ಇಂದು ಗೌರಮ್ಮಹಳ್ಳಿ ಕಾರ್ಯಕ್ರಮದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಹೊಗಳಿದರು. ವೇದಿಕೆಯಲ್ಲಿ ಮಾತನಾಡಿದ ಇಸಾಕ್‌ಬೇಗ್‌ ಮತ್ತು ಇಬ್ರಾಹಿಂ ಬೇಗ್‌ ಶಾಸಕರ ಗುಣಗಾನ ಮಾಡಿದರು.

ಮತದಾನದ ವೇಳೆ ನಡೆದಿರುವ ಯಾವುದೇ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನಮ್ಮೆಲ್ಲರನ್ನು ಸಮಾನಭಾವದಿಂದ ಶಾಸಕರು ನೋಡುತ್ತಿದ್ದಾರೆ ಎಂದರು.