ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ನಾಟಿ ಕಾರ್ಯಕ್ಕೆ ಸ್ಥಳೀಯರು ಸಿಗುತ್ತಿಲ್ಲವೆಂದು, ದೂರದ ಒಡಿಶಾ ಕಾರ್ಮಿಕರ ಮೊರೆಹೋದ ಕುತ್ತಾರು ಬಟ್ಟೆದಡಿ ಮೂಲದ ಕೃಷಿಕರೊಬ್ಬರು ಕಳೆದ ಎರಡು ವರ್ಷಗಳಿಂದ ಲಾಭದಾಯಕವಾಗಿ ಕೃಷಿ ಕಾರ್ಯವನ್ನು ನಡೆಸುತ್ತಿದ್ದಾರೆ.೫೦ರ ಹರೆಯದ ಕುತ್ತಾರು ಬಟ್ಟೆದಡಿ ನಿವಾಸಿ ಕರುಣಾಕರ್ ಕಂಪ ಅವರಿಗೆ ಕುಟುಂಬದ ಪಾಲಿನಿಂದ ಒಂದು ಎಕರೆ ಗದ್ದೆ ದೊರೆತಿತ್ತು. ನಾಟಿ ಕಾರ್ಯ ನಡೆಸಲು ಕಾರ್ಮಿಕರ ಕೊರತೆ ಉಂಟಾಗಿ ಎರಡು ವರ್ಷಗಳ ಹಿಂದೆ ಗದ್ದೆಯನ್ನು ಹಾಗೆಯೇ ಪಾಳು ಬಿಟ್ಟಿದ್ದರು. ನಾಟಿ ಕಾರ್ಯದಲ್ಲಿ ಈ ಹಿಂದೆ ಭಾಗವಹಿಸುತ್ತಿದ್ದ ಮಹಿಳೆಯರೆಲ್ಲರೂ ಸ್ಥಳೀಯ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದ ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿದ್ದರು.ಗದ್ದೆಗಳಿದ ಒಡಿಶಾ ಕಾರ್ಮಿಕರು: ಕರುಣಾಕರ್ ಅವರು ಕಳೆದ ೩೫ ವರ್ಷಗಳಿಂದ ಪ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕಳೆದ 15 ವರ್ಷಗಳಿಂದ ಇವರೊಂದಿಗೆ ಒಡಿಶಾ ಕಾರ್ಮಿಕರು ಇದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಹ ಕಾರ್ಮಿಕರ ಬಳಿ ಕರುಣಾಕರ್ ಅವರು ತಮ್ಮ ಗದ್ದೆ ಕಾರ್ಮಿಕರಿಲ್ಲದೆ ಪಾಳು ಬಿದ್ದಿರುವುದು, ನಾಟಿ ಕಾರ್ಯ ನಡೆಸಲು ಆರ್ಥಿಕ ತೊಂದರೆ ಇರುವ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ಮನಗಂಡ ಸಹೋದ್ಯೋಗಿ ಐವರು ಕಾರ್ಮಿಕರು ನಾವು ನಾಟಿ ಮಾಡುತ್ತೇವೆಂದು ಹೇಳಿ ಕಳೆದ ವರ್ಷ ಹಾಗೂ ಈ ವರ್ಷ ಪಾಳು ಬಿದ್ದ ಗದ್ದೆಗಿಳಿದು ನಾಟಿ ಮಾಡಿದ್ದಾರೆ. ಬೆಳಗ್ಗೆ ೮ ಗಂಟೆಯಿಂದ ಕೆಲಸ ಆರಂಭಿಸುವ ಕಾರ್ಮಿಕರು ಮಧ್ಯಾಹ್ನದ ವೇಳೆ ಬಹುತೇಕ ಅರ್ಧ ಎಕರೆಯನ್ನು ಸಂಪೂರ್ಣಗೊಳಿಸಿದ್ದಾರೆ. ಊಟ- ಚಹಾವನ್ನು ಕರುಣಾಕರ್ ಪೂರೈಸುತ್ತಿದ್ದು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಭತ್ತ ಬೆಳೆಯಲು ನೀಡುವ ಸಹಾಯಧನವನ್ನು ಕಾರ್ಮಿಕರ ವೇತನಕ್ಕೆ ವಿನಿಯೋಗಿಸಿ ಯಶಸ್ಸನ್ನು ಕಾಣುತ್ತಿದ್ದಾರೆ.
ಒರಿಶಾದ ಕೆನರಾಪಡ ಜಿಲ್ಲೆಯ ಭಾಗೀರತಿ ದಾಸ್, ರಂಜನ್, ಬಾಬುರ್ ಮಲಿಕ್ , ಸ್ವರಾಜ್ ಮಲಿಕ್, ಪ್ರಯಾಗ್ ದಾಸ್ ಎಂಬವರು ಸೇರಿಕೊಂಡು ಸದ್ಯ ಕರುಣಾಕರ್ ಅವರ ಒಂದು ಎಕರೆ ಜಮೀನಲ್ಲಿ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.ವೈಜ್ಞಾನಿಕ ಯುಗದಲ್ಲಿ ಕೃಷಿ ಮಾಡಿದರೆ ಮಾತ್ರ ಊಟ ಮಾಡಬಹುದು ಅನ್ನುವ ಮನಸ್ಸು ಯಾರಿಗೂ ಇಲ್ಲ. ನಾಟಿ ಮಾಡುತ್ತಿದ್ದ ಮಹಿಳೆಯರು ಹೆಚ್ಚಿನ ವೇತನ ಸಿಗುತ್ತದೆ ಎಂದು ಹೊರ ಆಸ್ಪತ್ರೆಗೆ ದುಡಿಯಲು ತೆರಳುತ್ತಿದ್ದಾರೆ. ಹಿಂದೆ ಸಹೋದರರು ಸೇರಿಕೊಂಡು ಗದ್ದೆ ಕಾಯಕದಲ್ಲಿ ಭಾಗಿಯಾಗುತ್ತಿದ್ದೆವು. ಸದ್ಯ ಜಾಗ ಪಾಲಾದ ನಂತರ ಒಬ್ಬರೊಬ್ಬರೇ ದುಡಿಯಲು ಅಸಾಧ್ಯವಾಗಿದೆ. ಎರಡು ವರ್ಷ ಗದ್ದೆ ಖಾಲಿ ಬಿಟ್ಟಿದ್ದೆವು. ಸಹೋದ್ಯೋಗಿ ಕಾರ್ಮಿಕರಿಂದ ನಾಟಿ ಮಾಡಲು ಸಾಧ್ಯವಾಯಿತು. ಒಂದು ಎಕರೆ ಗದ್ದೆಯಲ್ಲಿ ಕಳೆದ ವರ್ಷ ಯಶಸ್ವಿ ಲಾಭದಾಯಕ ಫಲವನ್ನು ಪಡೆದಿದ್ದೇವೆ. ಈ ವರ್ಷವೂ ಅದೇ ನಿರೀಕ್ಷೆಯಲ್ಲಿದ್ದೇವೆ. ಪತ್ನಿ ಹಾಗೂ ಪಿಯುಸಿ ವಿದ್ಯಾಭ್ಯಾಸ ನಡೆಸುವ ಮಗಳು ಕಾಯಕಕ್ಕೆ ಪ್ರೋತ್ಸಾಹ ನೀಡಿ ಕೈಜೋಡಿಸುತ್ತಾರೆ. ಇದೇ ಹುಮ್ಮಸ್ಸಿನೊಂದಿಗೆ ತನ್ನ ಫ್ಯಾಕ್ಟರಿ ಕೆಲಸದ ಮಧ್ಯೆ ನಾಟಿ ಕಾರ್ಯದಲ್ಲಿಯೂ ಭಾಗಿಯಾಗುತ್ತಿದ್ದೇನೆ. ಒಡಿಶಾ ಕಾರ್ಮಿಕರು ಹತ್ತಿರವಾಗಿ ನೆಡದೆ ದೂರದೂರವಾಗಿ ಪೈರು ನೆಡುವುದರಿಂದ ಆ ಭಾಗದ ನಾಟಿ ಪದ್ಧತಿ ಇಲ್ಲಿಯೂ ಲಾಭದಾಯಕವಾಗುತ್ತಿದೆ
- ಕರುಣಾಕರ್ ಕಂಪ, ಕೃಷಿಕರು, ಗದ್ದೆ ಮಾಲಕರುಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಫ್ಯಾಕ್ಟರಿಗೆ ರಜೆಯಿರುವುದರಿಂದ ಗೆಳೆಯ, ಸಹುದ್ಯೋಗಿ ಕರುಣಾಕರ್ ಅವರ ಸಹಾಯಕ್ಕೆ ಬಂದಿದ್ದೆವು. ಕಳೆದ ವರ್ಷದಂತೆ ಈ ಬಾರಿಯೂ ನಾಟಿಯಲ್ಲಿ ಭಾಗವಹಿಸುತ್ತಿದ್ದೇವೆ. ಗದ್ದೆ ಮಣ್ಣು ಉತ್ತಮವಾಗಿದ್ದರೆ ೧ ಎಕರೆ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬಹುದು. ಕಳೆದ ವರ್ಷ ಕರುಣಾಕರ್ ಸಹಾಯ ಕೇಳಿದ್ದರು. ಅದರಂತೆ ೬ ಮಂದಿ ಕಾರ್ಮಿಕರು ಸಹಕರಿಸಿ, ಗದ್ದೆಯಲ್ಲಿ ದುಡಿದ ಫಲವಾಗಿ ಅವರಿಗೆ ಲಾಭ ತಂದುಕೊಟ್ಟಿದ್ದೇವೆ. ಊರಿನಲ್ಲಿ ೨-೩ ಎಕರೆ ಜಮೀನಿನಲ್ಲಿ ಗದ್ದೆ ಕೆಲಸಗಳನ್ನು ನಡೆಸುತ್ತೇವೆ, ಕೃಷಿ ಕೆಲಸವಿಲ್ಲದ ಸಂದರ್ಭ ಫ್ಯಾಕ್ಟರಿ ಕೆಲಸಕ್ಕೆ ಬರುತ್ತಿದ್ದೇವೆ. ಸಹಾಯ ಕೇಳಿದ್ದಾಗ ಇಲ್ಲ ಅನ್ನದೇ ರಜೆಯಿದ್ದಾಗೆಲ್ಲಾ ಕೆಲಸದಲ್ಲಿ ಭಾಗಿಯಾಗಿದ್ದೆವು.ಭಾಗೀರಥಿ ದಾಸ್, ಕಾರ್ಮಿಕರು