ನ. 4ರಿಂದ ಮೆಡಿಕಲ್ ಸರ್ವೀಸ್ ಸೆಂಟರ್‌ನ 7ನೇ ಅಖಿಲ ಭಾರತ ಸಮ್ಮೇಳನ
KannadaprabhaNewsNetwork | Published : Oct 18 2023, 01:00 AM IST
ನ. 4ರಿಂದ ಮೆಡಿಕಲ್ ಸರ್ವೀಸ್ ಸೆಂಟರ್‌ನ 7ನೇ ಅಖಿಲ ಭಾರತ ಸಮ್ಮೇಳನ
ಸಾರಾಂಶ
ಮೆಡಿಕಲ್ ಸರ್ವೀಸ್ ಸೆಂಟರ್‌ನ(ಎಂಎಸ್‌ಸಿ) 7ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನ. 4 ಮತ್ತು 5 ರಂದು ಹಮ್ಮಿಕೊಳ್ಳಲಾಗಿದೆ
ಕನ್ನಡಪ್ರಭ ವಾರ್ತೆ ಬಳ್ಳಾರಿ ಮೆಡಿಕಲ್ ಸರ್ವೀಸ್ ಸೆಂಟರ್‌ನ(ಎಂಎಸ್‌ಸಿ) 7ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನ. 4 ಮತ್ತು 5 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್‌ನ ರಾಜ್ಯ ಕಾರ್ಯದರ್ಶಿ ಹಾಗೂ ಖ್ಯಾತ ನೇತ್ರತಜ್ಞ ಡಾ. ವಸುಧೇಂದ್ರ ಎನ್. ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆಡಿಕಲ್ ಸರ್ವಿಸ್ ಸೆಂಟರ್ ಭಾರತದ ನೋಂದಾಯಿತ, ರಾಷ್ಟ್ರಮಟ್ಟದ ಲಾಭೋದ್ದೇಶವಿಲ್ಲದ ಸಾಮಾಜಿಕ- ವೈದ್ಯಕೀಯ ಸ್ವಯಂಸೇವಾ ಸಂಸ್ಥೆಯಾಗಿದ್ದು, ವೈದ್ಯಕೀಯ ಕ್ಷೇತ್ರದ ಎಲ್ಲ ಪದ್ಧತಿಗಳ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರನ್ನು ಒಳಗೊಂಡಿದೆ. ಎಲ್ಲರಿಗೂ ಉಚಿತವಾಗಿ ಹಾಗೂ ಸಮಾನವಾಗಿ ವೈದ್ಯಕೀಯ ಸೌಲಭ್ಯ ಸಿಗಬೇಕೆಂಬುದು ಮೆಡಿಕಲ್ ಸರ್ವಿಸ್ ಸೆಂಟರ್‌ನ ಮುಖ್ಯ ಉದ್ದೇಶವಾಗಿದೆ ಎಂದರು. ಸಮ್ಮೇಳನವನ್ನು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ರಮೇಶ್ ಕೃಷ್ಣ ಕೆ. ಭಾಗವಹಿಸುವರು. ಸಮ್ಮೇಳನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ವೃತ್ತಿಪರರು ಭಾಗವಹಿಸಲಿದ್ದಾರೆ. ದೇಶದ ವಿವಿಧೆಡೆಗಳಿಂದ ಮತ್ತು ವಿದೇಶಗಳಿಂದ ವೈದ್ಯರು, ವೈದ್ಯಕೀಯ ಶಿಕ್ಷಕರು, ವಿಜ್ಞಾನಿಗಳು ಮತ್ತು ತಜ್ಞರು, ಆರೋಗ್ಯ ಕ್ಷೇತ್ರದ ವೃತ್ತಿಪರರು ಮತ್ತು ವೈದ್ಯಕೀಯ- ನರ್ಸಿಂಗ್-ಅರೆವೈದ್ಯಕೀಯ ವಿದ್ಯಾರ್ಥಿಗಳ ಸುಮಾರು 500 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು ಎಂದರು. ನಗರದ ಹಿರಿಯ ಶಸ್ತ್ರಚಿಕಿತ್ಸಕ ಹಾಗೂ ಮೆಡಿಕಲ್ ಸರ್ವಿಸ್ ಸೆಂಟರ್‌ನ ರಾಜ್ಯ ಸಲಹೆಗಾರ ಡಾ. ಅರವಿಂದ್ ಪಟೇಲ್, ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯ ಹಾಗೂ ಮೂತ್ರ ರೋಗ ತಜ್ಞ ಡಾ. ಗೋವರ್ಧನ ರೆಡ್ಡಿ, ಎಂಎಸ್‌ಸಿ ಜಿಲ್ಲಾ ಸಂಘಟಕ ಡಾ. ಪ್ರಮೋದ್ ಎನ್. ಸುದ್ದಿಗೋಷ್ಠಿಯಲ್ಲಿದ್ದರು.