ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಬಿಲ್ಲವ ಸಮುದಾಯದ ಮಹಿಳೆಯರ ಹಾಗೂ ನಗರ ಭಜನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದ ಮೇಲೆ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಎಂಬವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಬೆನ್ನಿಗೇ ಆರೋಪಿ ಸಂಜೀವ ಪೂಜಾರಿ ಅವರನ್ನು ಬೆಳ್ಳಾರೆ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಲ್ಲವ ಜಾತಿಯ ಹೆಣ್ಣು ಮಕ್ಕಳನ್ನು ಭಜನಾ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅಶ್ಲೀಲ ಶಬ್ದ ಬಳಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಅರಣ್ಯ ಅಧಿಕಾರಿಯಾಗಿರುವ ಸಂಜೀವ ಪೂಜಾರಿ ಅವರು ಹಿಂದೂ ಸಮಾಜದ ನಂಬಿಕೆಯಾಗಿರುವ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದು, ತಕ್ಷಣವೇ ಅವರನ್ನು ಬಂಧಿಸಿ ಜಾಮೀನುರಹಿತ ಕೇಸು ದಾಖಲಿಸಬೇಕು. ಇಲ್ಲವಾದರೆ ಎಸಿಎಫ್- ಡಿಸಿಎಫ್ ಕಚೇರಿಗಳಲ್ಲಿ ಅಹೋರಾತ್ರಿ ಧರಣಿ ಹಾಗೂ ಪುತ್ತೂರಿನಲ್ಲಿ ಸ್ವಯಂಘೋಷಿತ ಬಂದ್ ನಡೆಸುವ ಬಗ್ಗ ಚಿಂತನೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ಹಿಂಜಾವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಮಾತನಾಡಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಸಂಜೀವ ಪೂಜಾರಿ ವಿರುದ್ಧ ಸಂಘಟನೆಯ ವತಿಯಿಂದ ೩ ದಿನಗಳ ಹಿಂದೆ ದೂರು ನೀಡಿದ್ದರೂ ಕಾನೂನು ತಜ್ಞರ ಸಲಹೆ ಪಡೆದುಕೊಂಡು ಕೇಸು ದಾಖಲಿಸುವುದಾಗಿ ಹೇಳಿ ಪೊಲೀಸ್ ಇಲಾಖೆ ಜಾಮೀನುಸಹಿತ ಪ್ರಕರಣ ದಾಖಲಿಸಿಕೊಂಡಿದೆ ಎಂದರು. ಜಿಲ್ಲಾ ಸಂಯೋಜಕ ಮೋಹನ್ ದಾಸ್ ಮಾತನಾಡಿ ಪೊಲೀಸ್ ಇಲಾಖೆ ಸಂಜೀವ ಪೂಜಾರಿ ಮೇಲೆ ಹಾಕಿರುವ ಸೆಕ್ಷನನ್ನು ಬದಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು..ಬಂಧನದ ಭರವಸೆ-ಪ್ರತಿಭಟನೆ ಹಿಂದಕ್ಕೆ: ಸಂಜೀವ ಪೂಜಾರಿ ವಿರುದ್ಧ ಜಾಮೀನು ರಹಿತ ಕೇಸು ಹಾಕಿಲ್ಲ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದ ಡಿವೈಎಸ್‌ಪಿ ಅರುಣ್ ನಾಗೇಗೌಡ ಅವರು, ಆರೋಪಿಯನ್ನು ಇಂದು ಸಂಜೆಯೊಳಗೆ ಬಂಧಿಸುವುದಾಗಿ ಭರವಸೆ ನೀಡಿದರು. ಆದರೂ ಜಗ್ಗದ ಪ್ರತಿಭಟನಾಕಾರರು ಈಗಲೂ ಮನೆಯಲ್ಲಿಯೇ ಇರುವ ಆತನನ್ನು ತಕ್ಷಣ ಬಂಧಿಸಬೇಕು ಎಂದು ಧರಣಿಗಿಳಿದು ಬಳಿಕ ಕಚೇರಿ ಮುಂಭಾಗದಲ್ಲಿಯೇ ಭಜನೆ ಆರಂಭಿಸಿದರು. ಕೊನೆಗೆ ಡಿವೈಎಸ್ಪಿ ಅವರು ನೀಡಿದ ಸ್ಪಷ್ಟ ಭರವಸೆಯಿಂದ ಪ್ರತಿಭಟನೆಯನ್ನು ವಾಪಸ್ ಪಡೆದರು. ಪ್ರತಿಭಟನೆಯಲ್ಲಿ ಸಂಘಪರಿವಾರದ ಸಂಘಟನೆಗಳ ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ದಿನೇಶ್ ಪಂಜಿಗ, ರವಿರಾಜ್ ಶೆಟ್ಟಿ ಕಡಬ, ಭರತ್ ಈಶ್ವರಮಂಗಲ, ಅನೂಪ್ ಎಣ್ಮೂರು, ಜಯಂತ ಕುಂಜೂರುಪಂಜ, ಸಂತೋಷ್ ಕೈಕಾರ, ಚನಿಲ ತಿಮ್ಮಪ್ಪ ಶೆಟ್ಟಿ, ಡಾ. ಕೃಷ್ಣಪ್ರಸನ್ನ, ಜೀವಂಧರ್ ಜೈನ್, ರಾಜೇಶ್ ಬನ್ನೂರು, ದಾಮೋದರ ಪಾಟಾಳಿ, ಯಶೋದಾ ಗೌಡ, ಚಂದ್ರಕಾಂತಿ ವಿಟ್ಲ ಮತ್ತಿತರರು ಪಾಲ್ಗೊಂಡಿದ್ದರು.ಸಂಜೀವ ಪೂಜಾರಿ ವಶಕ್ಕೆ ಪಡೆದ ಬೆಳ್ಳಾರೆ ಪೊಲೀಸರು
ಸಂಜೀವ ಪೂಜಾರಿ ವಿರುದ್ಧ ಕೇಸು ದಾಖಲಿಸುವಂತೆ ಕಳೆದ ೩ ದಿನಗಳ ಹಿಂದೆ ಹಿಂಜಾವೇ ವತಿಯಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಆತನನ್ನು ವಿಚಾರಣೆ ನಡೆಸಲಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಆತನನ್ನು ಬಂಧಿಸುವುದಾಗಿ ಡಿವೈಎಸ್‌ಪಿ ಭರವಸೆ ನೀಡಿದ್ದು, ಪ್ರತಿಭಟನೆ ನಡೆಸಿದ ಬೆನ್ನಿಗೇ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಕಾಣಿಯೂರಿನ ಸಂಜೀವ ಪೂಜಾರಿ ಅವರ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.