ಸಾರಾಂಶ
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿ ಸನ್ನಿಧಿಗೆ ಬುಧವಾರ ವಾದ್ಯ ಮೇಳಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಕೊಂಡೊಯ್ಯಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿ ಸನ್ನಿಧಿಗೆ ಬುಧವಾರ ವಾದ್ಯ ಮೇಳಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಕೊಂಡೊಯ್ಯಲಾಯಿತು.ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಂದ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಪಡೆದುಕೊಂಡರು. ಬಳಿಕ ದೇವಾಲಯದ ಸುತ್ತ ವಾದ್ಯಗೋಷ್ಠಿಯೊಂದಿಗೆ ಪ್ರದಕ್ಷಿಣೆ ಬರಲಾಯಿತು ನಂತರ ಚಿನ್ನಾಭರಣಗಳನ್ನು ತಲಕಾವೇರಿಗೆ ಕೊಂಡೊಯ್ದು ಕಾವೇರಿ ಮಾತೆಗೆ ತೊಡಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು,ಒಂದು ತಿಂಗಳ ಕಾಲ ತಲಕಾವೇರಿ ತಕ್ಕರಾದ ಕೋಡಿ ಮೊಟ್ಟಯ್ಯ ಅವರ ಸುಪರ್ದಿಯಲ್ಲಿ ಈ ಚಿನ್ನಾಭರಣಗಳಿದ್ದು ಪ್ರತಿ ದಿನ ಕಾವೇರಿ ಮಾತೆಗೆ ತೊಡಿಸಿ ತುಲಾಮಾಸದಲ್ಲಿ ಕಾವೇರಿಮಾತೆ ಕಂಗೊಳಿಸಲಿದ್ದಾಳೆ. ಕಿರು ಸಂಕ್ರಮಣದ ಬಳಿಕ ಚಿನ್ನಾಭರಣಗಳನ್ನು ಹಿಂತಿರುಗಿಸಿ ತಂದು ಆಡಳಿತಾಧಿಕಾರಿಗೆ ಒಪ್ಪಿಸಲಿದ್ದಾರೆ.
ಈ ಸಂದರ್ಭ ಆಡಳಿತಾಧಿಕಾರಿ ಚಂದ್ರಶೇಖರ್ , ಪಾರುಪತ್ಯೆಗಾರ ಪೊಣ್ಣಣ್ಣ, ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೊಡಗರ ಹರ್ಷ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ನಗರಸಭಾ ಸದಸ್ಯ ಶ್ವೇತಪ್ರಾಶತ್, ಕೊಡಗು ಗೌಡಯುವ ವೇದಿಕೆಯ ಸೋನಿಯಾ ಶರತ್ , ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯನಂದ, ದಂಬೆಕೊಡಿ ಆನಂದ, ಕುಟ್ಟನ ಸುದೀಪ್, ಪೈಕೆರ ಮನೋಹರ್, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಕಾರ್ಯದರ್ಶಿ ಚಲನ್, ಭಾಗಮಂಡಲ ದೇವಸ್ಥಾನದ ನಾಡು ತಕ್ಕರಾದ ಬಾರಿಕೆ ಮತ್ತು ನಂಗಾರು ಕುಟುಂಬಸ್ಥರು, ದೇಶ ತಕ್ಕರಾದ ಕುದುಪಜೆ ಮತ್ತು ಸೂರ್ತಲೆ ಕುಟುಂಬಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.