ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

| Published : Nov 06 2024, 11:47 PM IST

ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನೆಲೆ ಕೋರ್ಟ್‌ ಕುಮಟಾ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು, ಬುಧವಾರ ಕೋರ್ಟ್‌ನ ಸಿಬ್ಬಂದಿ ಎಸಿ ಕಚೇರಿಗೆ ರೈತ ಉದಯ್ ಬಾಳಗಿ ಅವರೊಂದಿಗೆ ತೆರಳಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಸೇರಿದಂತೆ ಕೊಠಡಿಯನ್ನು ಜಪ್ತಿ ಪಡಿಸಿಕೊಂಡಿದೆ.

ಕುಮಟಾ: ರೈತರೊಬ್ಬರ ಜಮೀನನ್ನು ನೀರಾವರಿ ಯೋಜನೆಗೆ ವಶಪಡಿಸಿಕೊಂಡು ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಕುಮಟಾದ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತಿ ಮಾಡಲು ಕುಮಟಾದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದ್ದು, ಬುಧವಾರ ಕೋರ್ಟ್‌ ಸಿಬ್ಬಂದಿ ಜಪ್ತಿ ಮಾಡಿದರು.

ಗೋಕರ್ಣದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಸಣ್ಣ ನೀರಾವರಿ ಇಲಾಖೆ ಅಂಕೋಲಾ- ಗೋಕರ್ಣ ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಿತ್ತು. ಈ ಸಂದರ್ಭದಲ್ಲಿ ಅಂಕೋಲಾದ ಗುಂಡಬಾಳದಲ್ಲಿ ರೈತ ಉದಯ್ ಬಾಳಗಿ ಎಂಬವರ ನಾಲ್ಕು ಗುಂಟೆ ಜಾಗವನ್ನು ತಾಲೂಕು ಆಡಳಿತ ಪಡೆದುಕೊಂಡಿತ್ತು. ಆದರೆ ಅವರಿಗೆ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆ 2022ರಲ್ಲಿ ಕುಮಟಾ ನ್ಯಾಯಾಲಯದಲ್ಲಿ ಉದಯ್ ದಾವೆ ಹೂಡಿದ್ದರು.

₹10,58,295 ನೀಡುವಂತೆ ತಾಲೂಕು ಆಡಳಿತಕ್ಕೆ ನ್ಯಾಯಾಲಯ ಆದೇಶಿಸಿತ್ತು. ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನೆಲೆ ಕೋರ್ಟ್‌ ಕುಮಟಾ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು, ಬುಧವಾರ ಕೋರ್ಟ್‌ನ ಸಿಬ್ಬಂದಿ ಎಸಿ ಕಚೇರಿಗೆ ರೈತ ಉದಯ್ ಬಾಳಗಿ ಅವರೊಂದಿಗೆ ತೆರಳಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಸೇರಿದಂತೆ ಕೊಠಡಿಯನ್ನು ಜಪ್ತಿ ಪಡಿಸಿಕೊಂಡಿದೆ.ಶ್ರೀಗಂಧ ಮರ ಕಡಿದು ಸಾಗಾಟ: ಬಂಧನ

ಶಿರಸಿ: ಶ್ರೀಗಂಧ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಕಳವೆ ಗ್ರಾಮದ ಹಂದಿಜಡ್ಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.ತಾಲೂಕಿನ ಕಳವೆಯ ಹಂದಿಜಡ್ಡಿಯ ಸುರೇಶ ನಾರಾಯಣ ಗೌಡ(೩೮) ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕಮಾಳಕೊಪ್ಪದ ಎ.ಜೆ. ಮಂಜಪ್ಪ(೪೨) ಬಂಧಿತ ವ್ಯಕ್ತಿಗಳು.

ಇವರಿಬ್ಬರು ತಾಲೂಕಿನ ಕಳವೆ ಗ್ರಾಮದ ಹಂದಿಜಡ್ಡಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಶ್ರೀಗಂಧದ ಜಾತಿಯ ಗಿಡಗಳನ್ನು ಕಡಿದ ಸಾಗಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ₹೨೬.೫೦೦ ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ ಮಾರ್ಗದರ್ಶನದಲ್ಲಿ ಶಿರಸಿ ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ಆರ್. ನಾಯ್ಕ, ಅಶೋಕ ಪೂಜಾರ, ಗಸ್ತು ಅರಣ್ಯ ಪಾಲಕರಾದ ಹನುಮಂತ ಕೆ.ಎಂ., ಪುಂಡಲೀಕ ತಾವರಕೇಡ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.