ಸಾರಾಂಶ
ಶಿರಹಟ್ಟಿ: ತಾಲೂಕಿನ ಮಜ್ಜೂರು ಗ್ರಾಮ ಪಂಚಾಯಿತಿಗೆ ಪ್ರಧಾನಮಂತ್ರಿ ವಸತಿ ಯೋಜನೆಯಡಿ ೩೦ ಮನೆಗಳು ಮಂಜೂರಾಗಿದ್ದು, ಅವನ್ನು ನಿರ್ಮಿಸಿಕೊಳ್ಳಲು ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಮಾಡಲು ಅಲ್ಲಿನ ಅಧಿಕಾರಿ ಪ್ರತಿ ಫಲಾನುಭವಿಯಿಂದ ₹ ೩ ಸಾವಿರ ಲಂಚ ಕೇಳುತ್ತಿದ್ದಾರೆಂದು ಫಲಾನುಭವಿ ಗುಡದಪ್ಪ ಭಂಡಾರಿ ಆರೋಪಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಮನವಿ ಸಲ್ಲಿಸಿ ಅವರು ಆರೋಪಿಸಿದರು.ಬಡ ಫಲಾನುಭವಿಗಳಿಗೆ ಇದರಿಂದ ತೀವ್ರ ತೊಂದರೆಯಾಗಿದ್ದು, ಶೀಘ್ರದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಬಳಿ ಅಹವಾಲು ಸಲ್ಲಿಸಿದರು. ಲಂಚ ಕೇಳಿದ ಸಿಬ್ಬಂದಿ ಯಾರು ಮತ್ತು ಫಲಾನುಭವಿಗಳಿಗೆ ಇಲ್ಲಿಯವರೆಗೆ ಯಾಕೆ ಮನೆ ನಿರ್ಮಿಸಿಕೊಟ್ಟಿಲ್ಲ ಎಂಬುದರ ಬಗ್ಗೆ ಕಡತಗಳನ್ನು ಪರಿಶೀಲಿಸಿ ತಕ್ಷಣ ಪರಿಹರಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಲುವೆಗೆ ನೀರು: ರೈತರ ಜಮೀನುಗಳಿಗೆ ನೀರುಣಿಸುವ ಹಾಗೂ ರೈತರ ಜೀವನಾಡಿ ಎನಿಸಿರುವ ತಾಲೂಕಿನ ಮಜ್ಜೂರು ಗ್ರಾಮದಲ್ಲಿರುವ ಕೆರೆಯನ್ನು ದುರಸ್ತಿಗೊಳಿಸಿ ತಕ್ಷಣ ಕಾಲುವೆ ಮೂಲಕ ನೀರು ಬಿಡಬೇಕು. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಮಾಚೇನಹಳ್ಳಿ ಗ್ರಾಮದ ಮುಖಂಡ ಶಂಕರ ಮರಾಠೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸಣ್ಣ ನೀರಾವರಿ ಇಲಾಖೆ ಅಡಿ ಬರುವ ಕೆರೆಗೆ ದುರಸ್ತಿ ಅಗತ್ಯವಿದೆ. ೬ ಗ್ರಾಮಗಳು ಸೇರಿ ಒಟ್ಟು ೧೭೦೦ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರು ಹರಿಯಲಿದ್ದು, ಕೆರೆ ಸಂಪೂರ್ಣ ತುಂಬಿದ್ದು, ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ರೈತರಿಗೆ ನೀರು ಸಿಗುತ್ತಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೆರೆಗೆ ಕೇಂದ್ರ ಸರ್ಕಾರದ ಹಣ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರದ ಹಣ ಇನ್ನು ಬಿಡುಗಡೆಯಾಗಿಲ್ಲ. ಈ ಕುರಿತು ತಕ್ಷಣ ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.ಶಿರಸ್ತೆದಾರ ತರಾಟೆಗೆ: ತಾಲೂಕಿನ ಸುಗ್ನಳ್ಳಿ ಗ್ರಾಮದಲ್ಲಿ ಹಕ್ಕು ಬಿಟ್ಟ ಪತ್ರ ಪ್ರಕಾರ ಉತಾರವನ್ನು ಪೂರೈಸಬೇಕೆಂದು ಎ.ಸಿ ಅವರಿಂದ ಆದೇಶ ಬಂದರೂ ಈವರೆಗೂ ಉತಾರ ನೀಡಿಲ್ಲ ಎಂದು ರೈತ ರಮೇಶ ಭಾವನೂರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ರೈತನಿಗೆ ಉತಾರ ಯಾಕೆ ನೀಡಿಲ್ಲ. ಅಧಿಕಾರಿಗಳ ಆದೇಶ ಯಾಕೆ ಪಾಲನೆ ಮಾಡುತ್ತಿಲ್ಲ. ಇದರಿಂದ ನಿಮಗೆ ಏನು ತೊಂದರೆ ಎಂದು ಜಿಲ್ಲಾಧಿಕಾರಿಗಳು ಶಿರಸ್ತೆದಾರ ಎನ್.ಬಿ. ದೊಡ್ಡಮನಿ ಅವನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಪ್ರಕಾರ ಇರುವ ಕೆಲಸವನ್ನು ಮಾಡುತ್ತಿಲ್ಲ ಎಂದಾದರೇ ಇನ್ನು ಯಾವ ಕೆಲಸ ಮಾಡಲು ನಿಮ್ಮಿಂದ ಸಾಧ್ಯ. ನಿಮ್ಮ ನಿರ್ಲಕ್ಷ್ಯ ಇದಕ್ಕೆ ಮುಖ್ಯ ಕಾರಣ. ತಕ್ಷಣ ರೈತನ ಸಮಸ್ಯೆ ಬಗೆಹರಿಸಿ ಎಂದು ತಾಕೀತು ಮಾಡಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಅನೇಕ ಇಲಾಖೆ ಅಧಿಕಾರಿಗಳು ಗೈರ ಉಳಿದಿದ್ದು, ಸಮಸ್ಯೆ ಇತ್ಯರ್ಥಕ್ಕೆ ತೊಂದರೆಯಾಗಿದ್ದರಿಂದ ಗರಂ ಆದ ಜಿಲ್ಲಾಧಿಕಾರಿ ಗೈರ ಉಳಿದಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಅನಿಲ ಬಡಿಗೇರ ಅವರಿಗೆ ಸೂಚನೆ ನೀಡಿದರು.ಸೂಕ್ತ ನ್ಯಾಯದ ಉದ್ದೇಶ: ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ, ಜಿಲ್ಲಾ ಹಂತದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ೯೮೫ ಅರ್ಜಿಗಳು ಬಂದಿದ್ದವು. ಆದರೆ ಇಲ್ಲಿ ೫೦ರಿಂದ ೬೦ ಅರ್ಜಿಗಳು ಬಂದಿದ್ದು, ೨೫ಕ್ಕೂ ಹೆಚ್ಚು ಅರ್ಜಿಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಜನರಿಗೆ ಅಗತ್ಯವಿರುವ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಿ. ಅನವಶ್ಯಕವಾಗಿ ಅವರಿಗೆ ತೊಂದರೆ ನೀಡಬೇಡಿ. ಜನರಿಂದ ಕಚೇರಿ ಅಲೆದಾಡಿಸುವ ಕೆಲಸ ಆಗಬಾರದು. ಪ್ರಮುಖವಾಗಿ ಸಂಧ್ಯಾ ಸುರಕ್ಷಾ, ಆಧಾರ, ಗೃಹಲಕ್ಷ್ಮೀ ಸಮಸ್ಯೆಗಳು ಪ್ರಮುಖವಾಗಿದ್ದು, ಸಿಬ್ಬಂದಿ ತಕ್ಷಣ ಅದಕ್ಕೆ ಪರಿಹಾರ ನೀಡುವ ಕಾರ್ಯ ಮಾಡಬೇಕು. ವೃಥಾ ಕಾಲಹರಣ ಸಲ್ಲದು ಎಂದು ಅಧಿಕಾರಿಗಳಿಗೆ ಸ್ವಷ್ಟವಾಗಿ ಸಂದೇಶ ನೀಡಿದರು.ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ, ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಒ ಡಾ. ನಿಂಗಪ್ಪ ಓಲೇಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.