ಹಲವು ವರ್ಷ ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿದ್ದ, ಸದ್ಯ ಬೆಳಗಾವಿಯಲ್ಲಿ ಕೃಷಿ ಇಲಾಖೆಯ ವಿಚಕ್ಷಣಾ ದಳದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ ಬಿಜಾಪೂರ ಅವರ ನಗರದ ಸಿಲ್ವರ್ ಆರ್ಚಡ್‌ ಬಡಾವಣೆ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದರು.

ಧಾರವಾಡ:

ರಾಜ್ಯದ ವಿವಿಧ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಇಲ್ಲಿಯ ಕೃಷಿ ಅಧಿಕಾರಿ ರಾಜಶೇಖರ ಬಿಜಾಪುರ ಮನೆ ಮೇಲೂ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬಾತ್‌ ರೂಂನ ಕಮೋಡ್‌ನಲ್ಲಿ ₹ 50 ಸಾವಿರ ಪ್ಲಶ್‌ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾರೆ.

ಹಲವು ವರ್ಷ ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿದ್ದ, ಸದ್ಯ ಬೆಳಗಾವಿಯಲ್ಲಿ ಕೃಷಿ ಇಲಾಖೆಯ ವಿಚಕ್ಷಣಾ ದಳದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ ಬಿಜಾಪೂರ ಅವರ ನಗರದ ಸಿಲ್ವರ್ ಆರ್ಚಡ್‌ ಬಡಾವಣೆ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದರು.

ರಾಣಿ ಚೆನ್ನಮ್ಮ ಬಡಾವಣೆಯಲ್ಲಿಯೂ ಮನೆಯೊಂದನ್ನು ಹೊಂದಿರುವ ರಾಜಶೇಖರ, ಈ ಮನೆಯನ್ನು ತಮ್ಮ ವೈಯಕ್ತಿಕ ಕಚೇರಿಯನ್ನಾಗಿ ಬಳಸುತ್ತಿದ್ದರು. ಜತೆಗೆ ಧಾರವಾಡ ಸಮೀಪದ ಯರಿಕೊಪ್ಪ ಗ್ರಾಮದ ಬಳಿ ಸುಮಾರು 3 ಎಕರೆ ಜಮೀನು ಹೊಂದಿರುವ ಬಗ್ಗೆ ಲೋಕಾಯುಕ್ತರು ಮಾಹಿತಿ ಪಡೆದಿದ್ದು, ಅಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ. ಈ ಎಲ್ಲ ಮಾಹಿತಿ ಕಲೆ ಹಾಕಿದ್ದ ಲೋಕಾ ಪೊಲೀಸರು ಏಕಕಾಲಕ್ಕೆ ಬೇರೆ ಬೇರೆ ತಂಡಗಳಲ್ಲಿ ದಾಳಿ ನಡೆಸಿ ಸಾಕಷ್ಟು ದಾಖಲೆ ವಶಪಡಿಸಿಕೊಂಡಿದ್ದಾರೆ.

ಚಳಿಯಲ್ಲೇ ದಾಳಿ:

ಮೈ ನಡುಗುವ ಚಳಿಯಲ್ಲಿಯೇ ಬೆಳಗ್ಗೆ 7ರ ಹೊತ್ತಿಗೆ ಲೋಕಾ ಪೊಲೀಸರು ರಾಜಶೇಖರ ಮನೆ ಬಾಗಿಲು ಬಡಿದಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯಲು ವಿಳಂಬ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಅಧಿಕಾರಿಗಳು ಏರುಧ್ವನಿಯಲ್ಲಿ ಮಾತನಾಡಿದ್ದರಿಂದ ರಾಜಶೇಖರ ಪತ್ನಿ ಮಂಜುಳಾ ಬಾಗಿಲು ತೆರೆದಿದ್ದಾರೆ. ಆದರೆ, ರಾಜಶೇಖರ ಮನೆಯಲ್ಲಿಲ್ಲ ಎಂದು ಹೇಳಿದ್ದಾರೆ. ಖಚಿತ ಮಾಹಿತಿ ಪಡೆದುಕೊಂಡೇ ಬಂದಿದ್ದ ಲೋಕಾ ಪೊಲೀಸರ ಪ್ರಶ್ನೆಗಳಿಂದಾಗಿ ಕೊನೆಗೆ ರಾಜಶೇಖರ ಹೊರಗೆ ಬರಬೇಕಾಯಿತು.

ಬಾತ್‌ ರೂಂನಲ್ಲಿ ಪ್ಲಶ್‌:

ಇನ್ನು, ಆರಂಭದಲ್ಲಿ ಅರ್ಧ ಗಂಟೆ ಬಾಗಿಲು ತೆರೆಯದೇ ಇರುವ ಕಾರಣ ಸಂಶಯ ಬಂದಾಗ, ಮನೆ ಸುತ್ತ ಪರಿಶೀಲನೆ ನಡೆಸಿದ ಲೋಕಾ ಪೊಲೀಸರಿಗೆ ಬಾತ್ ರೂಮ್‌ನಲ್ಲಿ ನಿರಂತರವಾಗಿ ನೀರಿನ ಶಬ್ದ ಕೇಳಿ ಬಂದಿದೆ. ಬಾಗಿಲು ತೆರೆದ ಬಳಿಕ ಒಂದೊಂದೇ ವಿಚಾರವನ್ನು ರಾಜಶೇಖರ ಬಾಯಿ ಬಿಟ್ಟಿದ್ದಾರೆ. ದಾಳಿ ಆಗುತ್ತಿದೆ ಎಂದರಿತ ರಾಜಶೇಖರ, ಮನೆಯಲ್ಲಿದ್ದ ಹಣವನ್ನು ಕಮೋಡ್‌ಗೆ ಹಾಕಿ, ಫ್ಲೆಶ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ₹ 50 ಸಾವಿರ ಫ್ಲೆಶ್ ಮಾಡಿರುವುದಾಗಿ ರಾಜಶೇಖರ ಹೇಳಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ಅನುಮಾನವಿದೆ. ಅಪಾರ ಪ್ರಮಾಣದ ಹಣವನ್ನು ಕಮೋಡ್‌ಗೆ ಹಾಕಿ, ಫ್ಲೆಶ್ ಮಾಡಿರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿದ್ದ ಸಾಕಷ್ಟು ದಾಖಲೆ ವಶಕ್ಕೆ ಪಡೆದು, ಅಕ್ರಮ ಆಸ್ತಿ ಇರುವುದನ್ನು ಲೋಕಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸುಮಾರು 300 ಗ್ರಾಂ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ದೊರೆತಿವೆ ಎಂಬ ಮಾಹಿತಿ ಇದೆ.

ಧಾರವಾಡ ಜಿಲ್ಲೆಯ ಆಸ್ತಿಗಳಲ್ಲದೇ ಹಾವೇರಿ ಜಿಲ್ಲೆ ಶಿಗ್ಗಾವಿ ಬಳಿಯ ವಾಟರ್ ಸ್ಪೋರ್ಟ್ಸ್ ನಲ್ಲೂ ಇವರ ಹೂಡಿಕೆ ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ನಿವೇಶನ ಹೊಂದಿರುವ ರಾಜಶೇಖರ ಧಾರವಾಡದ ಮನೆಯಲ್ಲಿ ಕೃಷಿ ಇಲಾಖೆಯಲ್ಲಿಯೇ ವಿಆರ್‌ಎಸ್‌ ಪಡೆದಿರುವ ಪತ್ನಿ, ತಂದೆ-ತಾಯಿ ಹಾಗೂ ಮಗಳೊಂದಿಗೆ ವಾಸವಾಗಿದ್ದಾರೆ. ಅವರೆಲ್ಲರ ಬ್ಯಾಂಕ್ ಪಾಸ್‌ಬುಕ್‌ ವಶಕ್ಕೆ ಪಡೆಯಲಾಗಿದೆ.