ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ವಾಲ್ಮಿಕಿ ನಿಗಮದ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದಲ್ಲಿ ಕೂಡಲೇ ಸಚಿವ ನಾಗೇಂದ್ರರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಖುದ್ದು ಅವರ ರಾಜೀನಾಮೆ ಪಡೆಯಬೇಕೆಂದು ಮಾಜಿ ಸಚಿವ ಮುರುಗೇಶ ನಿರಾಣಿ ಆಗ್ರಹಿಸಿದರು.ಅವರು ಬುಧವಾರ ಬೀದರ್‌ನಲ್ಲಿ ಈಶಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ರ ಪ್ರಚಾರಕ್ಕೆ ಆಗಮಿಸಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕೆಎಸ್ ಈಶ್ವರಪ್ಪರ ಪ್ರಕರಣದಲ್ಲಿ ಕೂಡಾ ಯಾವುದೇ ಪುರಾವೆ ಇಲ್ಲದಿದ್ದರು ಇದೇ ಕಾಂಗ್ರೆಸ್ಸಿಗರು ಸದನದ ಹೊರಗೆ ಹಾಗೂ ಒಳಗೆ ಪ್ರತಿಭಟನೆಗೆ ಇಳಿದಿದ್ದರು. ಇದರಿಂದ ಈಶ್ವರಪ್ಪನವರು ರಾಜೀನಾಮೆ ನೀಡಬೇಕಾಯಿತು. ಈಗ ಕೂಡಾ ಕಾಂಗ್ರೆಸ್ ಹಿಂದಿನ ನೆನಪು ಮಾಡಿ ಪಾಲಿಸಬೇಕು. ಇಲ್ಲದಿದ್ದಲ್ಲಿ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಆತ್ಮಹತ್ಯೆ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರು ಅಥವಾ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ನಿರಾಣಿ ಆಗ್ರಹಿಸಿದರು.ಗುಣಮಟ್ಟದ ಬೀಜ ವಿತರಿಸಲಿ:ಹವಾಮಾನ ಇಲಾಖೆ ವರದಿಯಂತೆ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಿಸಲಿ ಎಂದ ಅವರು, ಮುಖ್ಯಮಂತ್ರಿಗಳು ಕಳೆದ 5 ವರ್ಷ ಒಳ್ಳೆಯ ಗುಣಮಟ್ಟದ ಬೀಜ ನಾವು ವಿತರಿಸಿದಂತೆ ತಾವು ಕೂಡ ವಿತರಿಸಲಿ ಎಂದರು. ಕಡಿಮೆ ಬೆಲೆ ಬೀಜ ಕೊಟ್ಟು ಬೀಜ ನಾಟದೆ ಇದ್ದರೆ ಏನು ಪ್ರಯೋಜನ ಎಂದು ನುಡಿದರು.ಮೈತ್ರಿಗೆ ಯಾವುದೇ ತೊಂದರೆ ಇಲ್ಲ:
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪ್ರಜ್ವಲ್ ಖುದ್ದು ವಿಡಿಯೋ ಮಾಡಿ ಎಸ್ಐಟಿ ಎದುರು ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಈ ಪ್ರಕರಣದಿಂದ ಮೈತ್ರಿಗೆ ಯಾವುದೇ ಪರಿಣಾಮ ಬಿರಲ್ಲ ಎಂದರು.ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ:ರಾಜ್ಯದ ಕಾಂಗ್ರೆಸ್ ಸರ್ಕಾರದ 1 ವರ್ಷದ ಅವಧಿಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರೇ ಅಲ್ಲ ವಿನಃ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಕೂಡ ಅನುದಾನದ ಕೊರತೆಯಿಂದ ಅಸಮಾಧಾನಗೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ನಯಾ ಪೈಸೆ ಅನುದಾನ ಇಲ್ಲ. ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಆರಂಭಗೊಂಡ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಅಮರನಾಥ ಪಾಟೀಲರನ್ನು ಮತ್ತೆ ವಿಧಾನ ಪರಿಷತ್‌ಗೆ ಕಳುಹಿಸುವ ಮೂಲಕ ಈ ಭಾಗದ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪದವೀಧರರ ಮತದಾರರಲ್ಲಿ ಮನವಿ ಮಾಡಿಕೊಂಡರು.ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಚುನಾವಣಾ ಉಸ್ತುವಾರಿ ಬಾಬು ವಾಲಿ, ರೇವಣಸಿದ್ದಪ್ಪ ಜಲಾದೆ, ಶ್ರೀನಿವಾಸ ಚೌಧರಿ, ಬಸವರಾಜ ಪವಾರ, ಗುರುನಾಥ ರಾಜಗೀರಾ ಇದ್ದರು.