ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗಾಂಧಿ ಅವರನ್ನು ಅವಹೇಳನ ಮಾಡುತ್ತಿರುವುದನ್ನು ಕಂಡೂ ಕಾಣದಂತಿರುವ ಅಧಿಕಾರಿಗಳೇ ನಿಜವಾದ ದೇಶ ದ್ರೋಹಿಗಳು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಗಾಂಧೀಜಿ ಎಂಬ ವರ್ತಮಾನ’ ಎರಡು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಗಾಂಧಿ ಅವಹೇಳನ ಆಗುತ್ತಿದ್ದರೂ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಮಗೂ ಗಾಂಧೀಗೂ ಸಂಬಂಧವೇ ಇಲ್ಲವೆಂಬಂತಿದ್ದಾರೆ. ಕಾನೂನು ಕ್ರಮಕ್ಕೆ ಹಿಂಜರಿಯುವ ಯಾವುದೇ ಅಧಿಕಾರಿಗಳು ನಿಜವಾದ ದೇಶ ದ್ರೋಹಿಗಳು. ಇದನ್ನು ಸುಮ್ಮನಿದ್ದೇ ಒಪ್ಪಿಕೊಂಡಿದ್ದಾರೆ, ಒಪ್ಪಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಸಾಮಾಜಿಕ ಜಾಲತಾಣದ ಎಡಬಿಡಂಗಿಗಳಿಂದ ನಮ್ಮ ಯುವಕರ ಮೇಲೆ ಪರಿಣಾಮ ಬೀರುತ್ತಿವೆ. ಆ ವಿಚಾರಗಳೇ ಸತ್ಯವೆಂದು ಒಪ್ಪಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಯಾವುದೇ ವಿಚಾರವನ್ನೂ ಪರಾಮರ್ಶಿಸದೆ ಒಪ್ಪಿಕೊಳ್ಳಬಾರದು ಎಂದರು.
ಗಾಂಧಿ ಬರುತ್ತಾರೆ ಎಂದು ದೇಶದ ಜನವೇ ಸೇರುತ್ತಿತ್ತು. ಗಾಂಧಿ ಅವರು ಸಾರ್ವಜನಿಕ ಜೀವನವನ್ನು ಅಧ್ಯಾತ್ಮಿಕರಿಸಿ ಎಲ್ಲ ಧರ್ಮೀಯರನ್ನು ಒಟ್ಟಿಗೆ ತೆಗೆದುಕೊಂಡು ಹೋದರು. ಎಲ್ಲರನ್ನೂ ಒಗ್ಗಟ್ಟಿನ ಶಕ್ತಿಯಾಗಿ ಜೊತೆಗೆ ಕರೆದುಕೊಂಡು ಹೋದ ವ್ಯಕ್ತಿ ಯಾರಾದರೂ ರಾಷ್ಟ್ರದಲ್ಲಿ ಇದ್ದರೆ ಅದು ಮಹಾತ್ಮ ಗಾಂಧೀಜಿ ಮಾತ್ರ. 142 ಉಪವಾಸ ಮಾಡಿ 2023 ದಿವಸ ಜೈಲು ವಾಸ ಅನುಭವಿಸುತ್ತಾರೆ. ಏಕೆಂದರೆ ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸುತ್ತಾ ಇವೆಲ್ಲವನ್ನು ಮಾಡಿ ಗೆಲ್ಲುತ್ತಾರೆ ಎಂದು ಸ್ಮರಿಸಿದರು.ನಾವಿಂದು ಅಧಿಕಾರ, ಶ್ರೀಮಂತಿಕೆಯನ್ನು ಪೂಜಿಸುತ್ತಾ ಗಾಂಧಿ ಮೌಲ್ಯವನ್ನು ಮರೆತಿದ್ದೇವೆ. ಬಡವರು ಬಡವಾರಾಗಿಯೇ ಹಾಗೂ ಶ್ರೀಮಂತರು ಶ್ರೀಮಂತರಾಗಿಯೇ ಇರುವುದನ್ನು ಮೊದಲು ತೊಲಗಿಸಲು ಯೋಜನೆಗಳು ರೂಪುಗೊಳ್ಳಬೇಕು. ಜಾತಿ ಸಂಘರ್ಷ ಸಂಪೂರ್ಣವಾಗಿ ಕೊನೆಗೊಳ್ಳಬೇಕು. ಪ್ರಸ್ತುತದಲ್ಲಿ ಅವಶ್ಯವಾಗಿ ಭ್ರಷ್ಟಾಚಾರ ಮುಕ್ತ ದೇಶ ಮತ್ತು ಪ್ರಾಮಾಣಿಕ ಆಡಳಿತ ಬೇಕಿದೆ. ಇದನ್ನು ಯುವ ಜನತೆಯಲ್ಲಿ ಬಿತ್ತುವ ಕೆಲಸವನ್ನು ಮಾಡಬೇಕು. ಕೌಶಲ್ಯ ಹಾಗೂ ಹೃದಯದ ಶಿಕ್ಷಣ ಸಿಗಬೇಕೆಂದು ಗಾಂಧಿ ಅವರು ಹೇಳಿದ್ದರು, ಆದರೆ ಅದನ್ನು ದೂರವಿಟ್ಟು ಪಾಶ್ಚಿಮಾತ್ತಕ್ಕೆ ಒಗ್ಗಿಕೊಂಡಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಗಾಂಧೀಜಿ ಅವರನ್ನು ಒಪ್ಪಿಕೊಂಡರಷ್ಟೇ ಬದುಕು ಅಥವಾ ಭವಿಷ್ಯ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಟ್ಟಿಗೆ ನಿಲ್ಲಿಸಿ ಚರ್ಚೆ ನಡೆಸುವ ಅಗತ್ಯವಿಲ್ಲ, ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಅವರದ್ದಾದರೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರನ್ನು ತುಲನೆ ಮಾಡಿ ನೋಡಬಾರದು. ರಕ್ತಪಾತವಿಲ್ಲದೇ ಸ್ವಾತಂತ್ರ್ಯ ತಂದುಕೊಟ್ಟ ಮೇರುವ್ಯಕ್ತಿ, ಶಾಂತಿ ಧೂತ, ಅಹಿಂಸಾ ಪರಿಚಾರಕ ಗಾಂಧಿ ಅವರು ಮಹಾತ್ಮರಾದರು ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಧಾರಣ ಶಕ್ತಿ ಇದ್ದವರು ಮಾತ್ರ ಗಾಂಧಿ ತರಹ ಸರಳ ಜೀವನ ನಡೆಸಲು ಹಾಗೂ ಅವರ ಅನುಕರಣೆ ಸಾಧ್ಯವಾಗುತ್ತದೆ. ಏಕೆಂದರೆ ಸುಮ್ಮನೆ ಇದ್ದು ದಿಢೀರನೇ ಪಂಚೆ ಧರಿಸಿ ಕೋಲು ಹಿಡಿದು ನಡೆದರೆ ಹುಚ್ಚ ಎಂಬ ಪಟ್ಟ ಕಟ್ಟುತ್ತಾರೆ, ಗಾಂಧೀಜಿ ಕುರಿತು ಈಗಾಗಲೇ ಎರಡು ವಿಚಾರ ಸಂಕಿರಣ ನಡೆಸಿರುವುದರಿಂದ ಗಾಂಧಿ ವಿಚಾರವನ್ನ ಜನರ ಬಳಿ ಹೇಗೆ ತೆಗೆದುಕೊಂಡು ಹೋಗಬೇಕೆನ್ನುವುದು ಸಹಕಾರಿಯಾಗಿದೆ. ಆದರೆ ಗಾಂಧಿ ವಿಚಾರವನ್ನು ಬಲವಂತವಾಗಿಯಾದರೂ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಇಲ್ಲವಾದರೆ ಗಾಂಧಿ ಒಂಟಿ ಆಗುತ್ತಾರೆ ಎಂದು ಆತಂಕ ಪಟ್ಟರು.
ಸಮಾರೋಪಕ್ಕೂ ಮುನ್ನ ‘ಗಾಂಧೀಜಿ ಅವರ ಕನಸಿನ ಭಾರತ ಮತ್ತು ವರ್ತಮಾನ’ ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಮೇಶ್‌ಚಂದ್ರ ದತ್ತ, ‘ಗಾಂಧೀಜಿ: ಓದು ಮತ್ತು ಬರಹಗಳು’ ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ‘ಗಾಂಧೀಜಿ ಮತ್ತು ಅಹಿಂಸೆ’ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಮುರಳೀಧರ್, ‘ಗಾಂಧೀಜಿ ಮತ್ತು ತಾಯ್ತನ’ ಕವಯತ್ರಿ ಶುಭಶ್ರೀ, ‘ಗಾಂಧೀಜಿ ನಾವೇಕೆ ತಿಳಿಯಬೇಕು?’ ಕುರಿತಂತೆ ಬೆಂಗಳೂರು ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಅವರು ವಿಷಯ ಮಂಡಿಸಿದರು.ಗಾಂಧಿ ಚಿಂತಕ ಮಾದೇಗೌಡ ಭಾಗವಹಿಸಿದ್ದರು.