ತಾಲೂಕಿನ ತಲೇಖಾನ ಗ್ರಾಪಂಗೆ ಸಂಬಂಧಿಸಿದ ಎರಡು ವರ್ಷಗಳ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಗಳ ಮಾಹಿತಿ ನೀಡದೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಗ್ರಾಪಂ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಾರ್ಯದರ್ಶಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠ 10 ಸಾವಿರ ರು. ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಮಸ್ಕಿ
ತಾಲೂಕಿನ ತಲೇಖಾನ ಗ್ರಾಪಂಗೆ ಸಂಬಂಧಿಸಿದ ಎರಡು ವರ್ಷಗಳ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಗಳ ಮಾಹಿತಿ ನೀಡದೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಗ್ರಾಪಂ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಾರ್ಯದರ್ಶಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠ 10 ಸಾವಿರ ರು. ದಂಡ ವಿಧಿಸಿದೆ.ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಲೆಖಾನ್ ಗ್ರಾಪಂಯಲ್ಲಿ ನಡೆದ ವಿವಿಧ ಮಾಹಿತಿಗಳನ್ನು ಕೇಳಿ ಆರ್ಟಿಐ ಅಡಿಯಲ್ಲಿ ಎರಡು ವರ್ಷದ ಕ್ರಿಯಾ ಯೋಜನೆಗೆ ಆರ್ ಟಿ ಐ ಅಡಿಯಲ್ಲಿ 2024-25ನೇ ಸಾಲು ಹಾಗೂ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಅಧಿಕಾರಿಗಳಿಂದ ಅನುಮೋದನೆಗೊಂಡ ಕ್ರಿಯಾ ಯೋಜನೆಗಳ (ಬದಲಿ ಕಾಮಗಾರಿಗಳ ಸಹಿತ) ದೃಢೀಕೃತ ಪ್ರತಿಗಳನ್ನು ನೀಡುವಂತೆ ಅರ್ಜಿದಾರ ದುರ್ಗರಾಜ್ ಅವರು 2024ರ ಜೂ.6ರಂದು ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರಡಿ ದುರ್ಗರಾಜ್ ವಟಗಲ್ ಅವರು ಅರ್ಜಿ ಸಲ್ಲಿಸಿದ್ದರು.
ಎರಡು ಪ್ರತ್ಯೇಕ ಪ್ರಕರಣಗಳ ಮಾಹಿತಿ ಕೋರಲಾಗಿತ್ತು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ನಿಗದಿತ ಅವಧಿ ಯಲ್ಲಿ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ 2024ರ ಆ.27ರಂದು ಪ್ರಥಮ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಮಾಹಿತಿ ಸಿಗದ ಕಾರಣ 2025ರ ಫೆ.13ರಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಆಯೋಗವು ಸಕಾಲದಲ್ಲಿ ಮಾಹಿತಿ ಒದಗಿಸದೇ ಇರುವ ಅಧಿಕಾರಿಗಳಿಗೆ ದಂಡವನ್ನು ವಿಧಿಸುವ ಮೂಲಕ ಎಚ್ಚರಿಕೆ ನೀಡಿದೆ.ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗವು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿ ಥೋಮಸಪ್ಪ ಅವರಿಗೆ ಅರ್ಜಿದಾರರು ಕೋರಿದ ಮಾಹಿತಿಯನ್ನು ಉಚಿತವಾಗಿ ಒದಗಿಸಿ, ಸ್ವೀಕೃತಿ ಪತ್ರದೊಂದಿಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಮಾಹಿತಿ ನೀಡದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ, ಮಾಹಿತಿ ಹಕ್ಕು ಕಾಯ್ದೆಯ ಕಲಂ 20(1)ರಡಿ ₹25 ಸಾವಿರದವರೆಗೆ ದಂಡ ವಿಧಿಸಬಹುದೆಂಬ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಮಾಹಿತಿ ಒದಗಿಸದಿರುವುದು, ಆಯೋಗದ ಆದೇಶ ಪಾಲಿಸದಿರುವುದು ಮತ್ತು ದಂಡದ ವಿಚಾರವಾಗಿ ಲಿಖಿತ ಸಮಜಾಯಿಷಿ ಸಲ್ಲಿಸದಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. 2026ರ ನ.2ರಂದು ನಡೆದ ವಿಚಾರಣೆಯಲ್ಲಿಯೂ ಅರ್ಜಿದಾರರು ತಮಗೆ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದ್ದರು.
ಆಯೋಗದ ನಿರ್ದೇಶನಗಳನ್ನು ಪಾಲಿಸದೆ ಮಾಹಿತಿ ನೀಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದಾಗಿ ಪರಿಗಣಿಸಿದ ಆಯೋಗವು ಮಾಹಿತಿ ಹಕ್ಕು ಕಾಯ್ದೆ ಕಲಂ 20(1)ರಡಿ ಥೋಮಸಪ್ಪ ಅವರಿಗೆ ₹10 ಸಾವಿರ ದಂಡ ವಿಧಿಸಿದೆ. ಈ ಮೊತ್ತವನ್ನು ಅವರ ವೇತನದಿಂದ ಕಡಿತಗೊಳಿಸಿ ಸರ್ಕಾರದ ನಿಗದಿತ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಬೇಕು. ಜಮೆ ಮಾಡಿದ ರಶೀದಿಯೊಂದಿಗೆ ವರದಿ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ನಿರ್ದೇಶಿಸಿದೆ.