ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳು ಇಂದಿಗೂ ಜೀವಂತವಾಗಿದ್ದು, ಸಾಮಾಜಿಕ ಸಮಾನತೆ ತತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಅವರ ಪ್ರತಿಪಾದನೆಗಳು ಭಾರತ ಸಂವಿಧಾನದ ಮೂಲಕ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿವೆ ಎಂದು ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ತಿಳಿಸಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಅಂಬೇಡ್ಕರ್ ಅವರು, ತಾವು ಎದುರಿಸಿದ ಸವಾಲುಗಳನ್ನು ಮೆಟ್ಟಿ ನಿಂತು ಸಾಮಾಜಿಕ ನ್ಯಾಯದ ಹರಿಕಾರರಾದರು. ಅವರ ಬದುಕು ಒಂದು ತೆರೆದ ಪುಸ್ತಕದಂತಿದ್ದು, ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಮಾತನಾಡಿ, ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಪದವಿಗಳನ್ನು ಪಡೆದ ಏಕೈಕ ಭಾರತೀಯರಾಗಿದ್ದಾರೆ. ಇದು ಅವರ ಜ್ಞಾನ ಶ್ರೀಮಂತಿಕೆಯ ಸಾಕ್ಷಿಯಾಗಿದೆ ಎಂದು ಹೇಳಿದರು.

ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಎನ್‌ ಸಿಸಿ ಫ್ಲೈಯಿಂಗ್ ಆಫೀಸರ್ ಡಾ.ಪಿ.ಜಿ. ಪುಷ್ಪರಾಣಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಜಿ. ದೊಡ್ಡರಸಯ್ಯ ಮೊದಲಾದವರು ಇದ್ದರು.