ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ, ಜಿಲ್ಲಾ ಘಟಕಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಸಮಿತಿ ಅಧ್ಯಕ್ಷ ಶರಣಿಕುಮಾರ ದೋಕಾ ಅವರು ಹಠಾತ್ ಸಭೆ ರದ್ದುಗೊಳಿಸಿದ ಪ್ರಸಂಗ ನಡೆದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ, ಜಿಲ್ಲಾ ಘಟಕಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಸಮಿತಿ ಅಧ್ಯಕ್ಷ ಶರಣಿಕುಮಾರ ದೋಕಾ ಅವರು ಹಠಾತ್ ಸಭೆ ರದ್ದುಗೊಳಿಸಿದ ಪ್ರಸಂಗ ನಡೆದಿದೆ.

ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ಪ್ರಗತಿ ಕೆಲಸ ಹೇಗೆ ನಡೆದಿದೆ ? ಇನ್ನೂ ಏನೇನು ಆಗಬೇಕಿದೆ ? ಸೇರಿದಂತೆ ವಿವಿಧ ವಿಷಯಗಳ ಚರ್ಚೆಗಾಗಿ ಇಲ್ಲಿನ ಜಿಲ್ಲಾ ಪಂಚಾಯತ್‌ ಕಚೇರಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಭೆ ಕರೆಯಲಾಗಿತ್ತು. ಬೆಳಗ್ಗೆ 11ಕ್ಕೆ ಅಧ್ಯಕ್ಷ ದೋಕಾ ನೇತೃತ್ವದಲ್ಲಿ ಉಪಾಧ್ಯಕ್ಷರು, ಸದಸ್ಯರು ಮತ್ತು ಆರು ತಾಲೂಕುಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು. ಈ ಐದು ಯೋಜನೆಗಳಿಗೆ ಸಂಬಂಧಪಡುವ ಅಧಿಕಾರಿಗಳೂ ಸಹ ಆಗಮಿಸಿದ್ದರು. ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಪ್ರಭಾರಿ ಸಿಇಓ ಆಗಿದ್ದರಿಂದ ಅವರು ಬರಬೇಕೆಂಬ ಸಮಿತಿ ಬೇಡಿಕೆಗೆ ಧ್ವನಿಗೂಡಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ದೋಕಾ ಅವರು, ಇದು 2ನೇ ಸಲ ಸಭೆ ರದ್ದು ಮಾಡಲಾಗುತ್ತಿದೆ. ಕಳೆದ ಆ.13ರಂದು ಸಹ ಜಿ.ಪಂ. ಸಿಇಓ ಅವರು ಬರಲಿಲ್ಲ. ಕೇಳಿದರೆ ಸಿಎಂ ಅವರು ಕರೆದ ಸಭೆಗೆ ಹೋಗಿದ್ದಾಗಿ ಹೇಳಿದರು. ಆಗಲೂ ಸಭೆ ನಡೆಸಲಿಲ್ಲ. ನಂತರ ಅಧಿಕಾರಿಗಳೇ ಆ.31ರಂದು ಸಭೆ ನಿಗದಿ ಮಾಡಿದ್ದಾರೆ. ಆದರೂ ಸಭೆಗೆ ಬಾರದೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಮತ್ತು ಸಮಿತಿಯನ್ನು ಉನ್ನತ ಅಧಿಕಾರಿಗಳು ಕೆಳಮಟ್ಟದಲ್ಲಿ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಯ ಜಿಲ್ಲಾ ಮಟ್ಟದ ಸಭೆ ಬರುವುದಿಲ್ಲ ಎಂದರೇ ಏನು ಅರ್ಥ ಎಂದು ಕಿಡಿಕಾರಿದರು.

ಉಪಾಧ್ಯಕ್ಷ ರಮೇಶ ದೊರೆ ಮಾತನಾಡಿ, ಅವರು ಬರುವವರೆಗೂ ಸಭೆ ನಡೆಸುವುದೇ ಬೇಡ ಎಂದರು. ಸುಮಾರು ಎರಡು ತಾಸಿಗೂ ಹೆಚ್ಚಿನ ಸಮಯ ಅವರಿಗಾಗಿ ಸಮಿತಿ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಕಾದು ಕೊನೆಗೆ ಸಭೆ ಮತ್ತೊಮ್ಮೆ ಮುಂದೂಡಿದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ಹಣಮಂತ ಕಾನಳ್ಳಿ, ಹಳ್ಳಪ್ಪ ಹವಾಲ್ದಾರ, ತಾಲೂಕು ಅಧ್ಯಕ್ಷರುಗಳಾದ ಬಸವರಾಜಪ್ಪ ಬಾಗಲಿ, ಕೃಷ್ಟಪ್ಪಗೌಡ ಆಲ್ದಾಳ, ಬೀರಲಿಂಗಪ್ಪ ಬ್ಯಾದಾಪುರ, ಕೃಷ್ಣಾ ಜಾಧವ್, ಖಾಜಾ ಮೈನೋದ್ದಿನ್ ಮಿರ್ಚಿ, ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಘಟಕದ ಸದಸ್ಯರು ಸೇರಿದಂತೆ ಇತರರಿದ್ದರು.