ಅಧಿಕಾರಿಗಳು ತಾಳ್ಮೆಯಿಂದ ಕಾರ್ಯನಿರ್ವಹಿಸಿ: ಗೌಡಪ್ಪನವರ

| Published : Aug 22 2024, 12:56 AM IST

ಸಾರಾಂಶ

Officials act with patience: Gaudappa

-ಜಿ.ಪಂ. ನಿವೃತ್ತ ಮುಖ್ಯ ಯೋಜನಾಧಿಕಾರಿ ಗುರುನಾಥ ಎನ್. ಗೌಡಪ್ಪನವರಿಗೆ ಸನ್ಮಾನ

-----

ಕನ್ನಡಪ್ರಭ ವಾರ್ತೆ ಶಹಾಪುರ

ಸರಕಾರ ನೀಡಿದ ಅಧಿಕಾರದ ಚೌಕಟ್ಟಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ತಮ್ಮ ಸೇವಾವಧಿಯಲ್ಲಿ ಗುರಿಗೆ ಅನುಸಾರ ನಿಗದಿತ ಅವಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಲ್ಲಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಜಿ.ಪಂ.ನಿವೃತ್ತ ಮುಖ್ಯ ಯೋಜನಾಧಿಕಾರಿ ಗುರುನಾಥ ಎನ್. ಗೌಡಪ್ಪನವರ ಹೇಳಿದರು.

ತಾ.ಪಂ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ತಾ.ಪಂ.ಸಭಾಂಗಣದಲ್ಲಿ ನಡೆದ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ತಮ್ಮ ಕೆಳಹಂತದ ಅಧಿಕಾರಿ, ಸಿಬ್ಬಂದಿಯನ್ನು ವಿಶ್ಚಾಸಕ್ಕೆ ತೆಗೆದುಕೊಂಡ ಅವರ ಸಹಕಾರದಿಂದ ಕೆಲಸ ಮಾಡಿದರೆ, ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯವೆಂದರು.

ಸರ್ಕಾರದ ಜನಪರ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಯೋಜನೆಯ ನಿಯಮಾನುಸಾರ ಅನುಷ್ಠಾನ ಮಾಡುವಾಗ ಅನುಷ್ಠಾನ ಅಧಿಕಾರಿಗಳಿಗೆ ಆರಂಭದಲ್ಲಿ ಅನಗತ್ಯವಾಗಿ ಸಮಸ್ಯೆಗಳು ಎದುರಾಗುವ ಸಂಭವ ಇರುತ್ತದೆ. ಯೋಜನೆಯ ನಿಯಮಾವಳಿಗಳ ಕುರಿತು ತಿಳುವಳಿಕೆ ನೀಡಿ, ಪ್ರಗತಿ ಸಾಧಿಸಬೇಕು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ದೇವರಿಗೆ ಸೇವೆ ಸಲ್ಲಿಸಿದಂತೆ ಎಂದು ತಿಳಿಸಿದರು.

ತಾಲೂಕು ಪಂಚಾಯ್ತಿಗೆ ಚುನಾಯಿತ ಪ್ರತಿನಿಧಿಗಳ ತಂಡದ ಅನುಪಸ್ಥಿತಿಯಲ್ಲಿ ಸರ್ಕಾರ ಶಹಾಪುರ ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಗಳಾಗಿ ನೇಮಿಸಿದಾಗಿನಿಂದ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿಯಮಾನುಸಾರ ಕಾಲ ಕಾಲಕ್ಕೆ ತಾಲೂಕು ಪಂಚಾಯಿತಿ ಸಾಮನ್ಯ ಸಭೆ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಯೋಜನೆ, ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲಿಸಿ, ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ಗುರುನಾಥ ಎನ್. ಗೌಡಪ್ಪನವರು ತಮ್ಮ ಸೇವಾ ಅವಧಿಯಲ್ಲಿ ನೀಡಿದಂತಹ ಮಾರ್ಗದರ್ಶನ ಇಂದಿನ ಕಿರಿಯ ನೌಕರರಿಗೆ ಸಹಕಾರಿಯಾಗಲಿದೆ. ಅವರ ಸಹಕಾರವಿಲ್ಲದೇ ಆಡಳಿತ ಸುಗಮವಾಗಿ ಸಾಗಲು ಸಾಧ್ಯವಿಲ್ಲ. ಅವರ ಸೇವೆಗಳನ್ನು ಗಮನದಲ್ಲಿಟ್ಟುಕೊಂಡು ಸೇವೆ ಸಲ್ಲಿಸುವುದು ಮುಖ್ಯ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್ ಕುಮಾರ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಷಣ್ಮುಖಪ್ಪ, ತಾ. ಪಂ. ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ತಾ.ಪಂ.ಸಹಾಯಕ ಲೆಕ್ಕಾಧಿಕಾರಿ ತಿರುಮಲರಡ್ಡಿ, ತಾಲೂಕು ಯೋಜನಾಧಿಕಾರಿ ಸುಬ್ಬರಾಯ ಚೌದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಹಿರಾ ಬೇಗಂ ಇದ್ದರು.

-----

ಫೋಟೊ:21ವೈಡಿಆರ್1: ಶಹಾಪುರ ನಗರದ ತಾ.ಪಂ ಸಭಾಂಗಣದಲ್ಲಿ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಜಿ.ಪಂ. ನಿವೃತ್ತ ಮುಖ್ಯ ಯೋಜನಾಧಿಕಾರಿ ಗುರುನಾಥ ಎನ್. ಗೌಡಪ್ಪನವರಿಗೆ ಸನ್ಮಾನಿಸಲಾಯಿತು.