ನಾಲೆಗೆ ನೀರು ಹರಿಸದೆ ಅಧಿಕಾರಿಗಳು ರೈತರ ಬದುಕಿನಲ್ಲಿ ಚೆಲ್ಲಾಟ: ಮಂಜುನಾಥ್ ಆಕ್ರೋಶ

| Published : Jul 03 2025, 11:52 PM IST

ನಾಲೆಗೆ ನೀರು ಹರಿಸದೆ ಅಧಿಕಾರಿಗಳು ರೈತರ ಬದುಕಿನಲ್ಲಿ ಚೆಲ್ಲಾಟ: ಮಂಜುನಾಥ್ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಹೇಳಿದರೂ ಸಹ ನಾಲೆಗೆ ನೀರು ಹರಿಸಲು ಮುಂದಾಗಿಲ್ಲ ಎಂದರೆ ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರವೇ ಇರಬೇಕು. ನಾಲೆಗೆ ನೀರು ಹರಿಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ನೀತಿಯಿಂದ ರೈತರು ಕಟ್ಟಪಟ್ಟು ಬೆಳೆದಿರುವ ಕಬ್ಬು ಬೆಳೆ ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ಪಾಂಡವಪುರ: ಕೆಆರ್ ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ಅಧಿಕಾರಿಗಳು ನಾಲೆಗೆ ನೀರು ಹರಿಸದೆ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಟಿ.ಕೊಪ್ಪಲು ಮಂಜುನಾಥ್ ಆಕ್ರೋಶ ಹೊರಹಾಕಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದ್ರದ ದಡದಲ್ಲಿ ಉಪ್ಪಿಗೆ ಬರ ಎಂಬಂತಾಗಿದೆ ಮಂಡ್ಯ ಜಿಲ್ಲೆಯ ಜನರ ಬದುಕು. ಕೆಆರ್ ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಹಾಗೂ ನೀರಾವರಿ ಅಧಿಕಾರಿಗಳು ನಾಲಾ ಕಾಮಗಾರಿ ನೆಪ ಹೇಳಿಕೊಂಡು ಅಣೆಕಟ್ಟೆ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸದೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ನಾಲೆಯ ವ್ಯಾಪ್ತಿಯಲ್ಲಿ ಬೆಳೆದಿರುವ ರೈತರ ಕಬ್ಬು ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್ ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ಬಂದಾಗ ಎಲ್ಲಾ ನಾಲೆಗಳಿಗೂ ನೀರು ಹರಿಸುವಂತೆ ಅಧಿಕಾರಿ, ಜಿಲ್ಲಾಡಳತಕ್ಕೆ ಸೂಚನೆ ನೀಡಿದರೂ ಸಹ ಜಿಲ್ಲಾಡಳಿತ ನಾಲೆಗೆ ನೀರು ಹರಿಸಲು ಮುಂದಾಗಿಲ್ಲ ಎಂದು ದೂರಿದರು.

ಸಿಎಂ ಹೇಳಿದರೂ ಸಹ ನಾಲೆಗೆ ನೀರು ಹರಿಸಲು ಮುಂದಾಗಿಲ್ಲ ಎಂದರೆ ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರವೇ ಇರಬೇಕು. ನಾಲೆಗೆ ನೀರು ಹರಿಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ನೀತಿಯಿಂದ ರೈತರು ಕಟ್ಟಪಟ್ಟು ಬೆಳೆದಿರುವ ಕಬ್ಬು ಬೆಳೆ ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಒಣಗಿದರೆ ಇಳುವರಿ ಕಡಿಮೆಯಾಗಿ ನಷ್ಟ ಉಂಟಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಜವಾಬ್ದಾರರಾಗಬೇಕು. ಹಾಗಾಗಿ ಅಧಿಕಾರಿಗಳು, ಜಿಲ್ಲಾಡಳಿತ ಈ ಧೋರಣೆ ನೀತಿ ಬಿಟ್ಟು ಶೀಘ್ರವೇ ನಾಲೆಗೆ ನೀರು ಹರಿಸುವ ಮೂಲಕ ರೈತರ ರಕ್ಷಣೆ ಮಾಡಬೇಕು. ಇಲ್ಲವಾದರೆ ಜಿಲ್ಲೆಯ ಜನರು ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದ್ದರು.