ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿಲ್ಲ: ಈಶ್ವರ ಖಂಡ್ರೆ

| Published : Jul 29 2024, 12:55 AM IST

ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿಲ್ಲ: ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಬೇಸರ. ಕೃಷಿ ಇಲಾಖೆ ಬೇಡಿಕೆ ಪಟ್ಟಿ ಸಲ್ಲಿಸಿದ್ರೆ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ ಸಚಿವರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನಲ್ಲಿ ನೀರಾವರಿ ಯೋಜನೆ, ಕೃಷಿ, ತೋಟಗಾರಿಕೆ, ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಸೇರಿ ವಿವಿಧ ಯೋಜನೆಗಳಿಗೆ ಕೋಟಿಗಟ್ಟಲೇ ಅನುದಾನ ನೀಡಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಾವರಿ ಪ್ರದೇಶ ಹೆಚ್ಚಿಸಲು ಬಾಂದಾರ ಸೇತುವೆ, ಬಾಂದಾರ, ಕೆರೆ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಲಾಗುತ್ತಿದೆ. ಆದರೂ ಬಾಂದಾರಗಳಲ್ಲಿ ಸಮರ್ಪಕ ನೀರು ನಿಲುಗಡೆ ಆಗುತ್ತಿಲ್ಲ. ಈ ಕುರಿತಂತೆ ಗಂಭೀರವಾಗಿ ಕ್ರಮ ಕೈಗೊಳ್ಳಿ. ಮುಂದೆ ಹೀಗಾದಂತೆ ಅಧಿಕಾರಿಗಳು ಎಚ್ಚರ ವಹಿಸಿ ಅರ್ಧಕ್ಕೆ ನಿಂತ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.

ಕೃಷಿ ಭಾಗ್ಯ ಯೋಜನೆಯಡಿ ಈಗಿನಿಂದಲೇ ಕೃಷಿ ಹೊಂಡಕ್ಕಾಗಿ ರೈತರು ಸಲ್ಲಿಸುವ ಅರ್ಜಿ ಸ್ವೀಕರಿಸಬೇಕು. ಕಳೆದ ವರ್ಷ ಬೆಳೆ ವಿಮೆ ಪರಿಹಾರ ತಪ್ಪಿದ ಅರ್ಹರನ್ನು ಗುರುತಿಸಿ ಪುನಃ ಪರಿಹಾರ ಒದಗಿಸಬೇಕು. ತಾಡಪತ್ರಿ, ಸ್ಪಿಂಕ್ಲರ್‌ಗಾಗಿ ಅರ್ಜಿ ಸಲ್ಲಿಸುವ ಎಲ್ಲ ರೈತರಿಗೆ ಸೌಲಭ್ಯ ಒದಗಿಸಬೇಕು. ಕೃಷಿ ಇಲಾಖೆ ಬೇಡಿಕೆ ಪಟ್ಟಿ ಸಲ್ಲಿಸಿದರೆ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದುರೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ತಹಸೀಲ್ದಾರ ಮಲಿಕಾರ್ಜುನ ವಡ್ಡನಕೇರೆ, ತಾಪಂ ಇಓ ಸೂರ್ಯಕಾಂತ ಬಿರಾದಾರ, ಎ.ಡಿ ಚಂದ್ರಶೇಖರ ಬನ್ನಾಳೆ ಇದ್ದರು.

ರಾಶಿ ಮಾಡುವ ಯಂತ್ರಗಳ ದರ ನಿಗದಿಪಡಿಸಿ: ತಾಲೂಕಿನಲ್ಲಿ ರೈತರ ಹೊಲಗಳಲ್ಲಿನ ಬೆಳೆ ರಾಶಿ ಮಾಡುವ ಯಂತ್ರಗಳ ದರವನ್ನು ಕೃಷಿ ಅಧಿಕಾರಿಗಳು ನಿಗದಿಪಡಿಸಿ ರೈತರ ಖರ್ಚು‌ ವೆಚ್ಚ ತಗ್ಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಮನೆ ಹಾನಿಯಿಂದ ತಾಲೂಕಿನಲ್ಲಿ ಸುಮಾರು 32 ಮನೆಗಳು ಕುಸಿತ ಕಂಡಿದ್ದು ತಾಲೂಕು ಆಡಳಿತ ತಕ್ಷಣ ಪರಿಹಾರ ನೀಡಬೇಕು ಎಂದು ಸಚಿವ ಖಂಡ್ರೆ ಸೂಚಿಸಿದರು.

32.4ಲಕ್ಷ ರು. ಪರಿಹಾರ ವಿತರಣೆ: ಇದೇ ವೇಳೆ ಆತ್ಮಹತ್ಯೆ, ಹಾವು ಕಡಿತ ಮತ್ತು ಬಣವಿ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ 32.4ಲಕ್ಷ ರು. ಪರಿಹಾರ ಧನದ ಚೆಕ್‌ ವಿತರಿಸಿ ಸಾಂತ್ವನ ಹೇಳಿದರು.

ಸಾಲಬಾಧೆ ಆತ್ಮಹತ್ಯೆ ಮಾಡಿಕೊಂಡ ಶಮಶೇಪೂರ ವಾಡಿಯ ಗಣಪತರಾವ್‌, ಸಾಯಿಗಾಂವ್‌ ಗ್ರಾಮದ ಮಾರುತಿ, ಕೇಸರಜವಳಗಾ ಗ್ರಾಮದ ಸತೀಶ ಬೋರಾಳೆ, ಮೇಥಿಮೇಳಕುಂದಾ ಗ್ರಾಮದ ಮನೋಹರ, ಚಿಕಲಚಂದಾ ಗ್ರಾಮದ ರಮೇಶ ಅವರುಗಳ ಪರಿವಾರದ ಸದಸ್ಯರಿಗೆ ತಲಾ 5 ಲಕ್ಷ ರು, ಹಾವು ಕಡಿತದಿಂದ ಮೃತರಾದ ಬಾಳೂರು ಗ್ರಾಮದ ಮಲ್ಲಿಕಾರ್ಜುನ ಪಾಟೀಲ್‌ ಅವರ ಪರಿವಾರದ ಸದಸ್ಯರಿಗೆ 2 ಲಕ್ಷ ರು. ಮತ್ತು ಬಣವಿ ನಷ್ಟ ಅನುಭವಿಸಿದ ಭಾತಂಬ್ರಾ ಗ್ರಾಮದ ಜಗನ್ನಾಥ ಕಲ್ಲಪ್ಪ, ತೇಲಗಾಂವ್‌ ಗ್ರಾಮದ ಅಭಂಗರಾವ್‌ ಸಂಗ್ರಾಮ ಪರಿವಾರದ ಸದಸ್ಯರಿಗೆ ತಲಾ 20 ಸಾವಿರ ರು. ಚೆಕ್‌ ವಿತರಿಸಿದರು.