ಜಿಲ್ಲೆಯ 1.79 ಲಕ್ಷ ರೈತರಿಗೆ ಬರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ 5 ಸಾವಿರ ಜಮೆ ಮಾಡಲು ಸಿದ್ಧತೆ ನಡೆದಿದೆ
ಗದಗ: ಗದಗ ಜಿಲ್ಲೆಯ ಅಧಿಕಾರಿಗಳು ದಕ್ಷತೆಯಿಂದ (ಎಫಿಶಿಯೆಂಟ್ ಆಗಿ) ಕೆಲಸ ಮಾಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ನನಗೆ ಕಿಂಚಿತ್ತೂ ತೃಪ್ತಿ ತಂದಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತೀವ್ರ ಅಸಮಾಧಾನ ಹೊರಹಾಕಿದರು.
ಅವರು ಶುಕ್ರವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರ ಉಪಸ್ಥಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳ ವಿಳಂಬ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.ಡಿಸೆಂಬರ್ ಒಳಗಾಗಿ ಬರ ಪರಿಹಾರ: ಜಿಲ್ಲೆಯ 1.79 ಲಕ್ಷ ರೈತರಿಗೆ ಬರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ 5 ಸಾವಿರ ಜಮೆ ಮಾಡಲು ಸಿದ್ಧತೆ ನಡೆದಿದೆ. ಮೊದಲ ಹಂತದಲ್ಲಿ 59 ಸಾವಿರ ರೈತರ ಖಾತೆಗೆ ತಲಾ 2500 ಜಮೆಯಾಗಿದ್ದು, ಡಿಸೆಂಬರ್ ಒಳಗಾಗಿ ಉಳಿದ ಪರಿಹಾರ ಮೊತ್ತವನ್ನು ಜಮೆ ಮಾಡಲಾಗುವುದು ಎಂದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ವಿತರಣೆಯಲ್ಲಿ ಗೊಂದಲವಿದ್ದು, ಗದಗ, ಮುಂಡರಗಿ ಮತ್ತು ರೋಣ ತಾಲೂಕಿಗೆ ಇನ್ನೂ ಪರಿಹಾರ ಬಂದಿಲ್ಲ. ಈ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿಗಳು, ಒಟ್ಟು 183 ಕೋಟಿ ವಿಮೆಯಲ್ಲಿ ಈವರೆಗೆ 50.8 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂದರು. ಬರ ನಿರ್ವಹಣೆಗಾಗಿ ಜಿಲ್ಲೆಯ ಪಿಡಿ ಖಾತೆಗಳಲ್ಲಿ ಅಂದಾಜು 30 ಕೋಟಿ ಇರುವುದಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾಹಿತಿ ನೀಡಿದರು.ಪಿಯು ಫಲಿತಾಂಶ ಸುಧಾರಣೆಗೆ ತಾಕೀತು: ಜಿಲ್ಲೆಯ ಪಿಯು ಕಾಲೇಜುಗಳ ಕಳಪೆ ಫಲಿತಾಂಶಕ್ಕೆ ಶಾಸಕ ಎಸ್.ವಿ. ಸಂಕನೂರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳ 14 ಅಂಶಗಳ ಕ್ರಮ ಹಾಗೂ ತರಬೇತಿ ಶಿಬಿರಗಳು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ ಎಂದರು. ಮಧ್ಯಪ್ರವೇಶಿಸಿದ ಸ್ಪೀಕರ್ ಜಿ.ಎಸ್. ಪಾಟೀಲ, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಸಾಧನೆಯ ವರದಿ ಸಲ್ಲಿಸಲು ಸೂಚಿಸಿದರು.
ಗಂಗಾ ಕಲ್ಯಾಣ ಹಾಗೂ ನೀರಿನ ಸಮಸ್ಯೆ: ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ವಿಳಂಬ ಮಾಡುತ್ತಿದ್ದು, ಖಾಸಗಿ ವ್ಯಕ್ತಿಗಳಿಗೆ ತುರ್ತಾಗಿ ಟಿಸಿ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು. ಎರಡು, ಮೂರು ದಿನಗಳಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಟಿಸಿ ಅಳವಡಿಸುವಂತೆ ಎಚ್.ಕೆ. ಪಾಟೀಲ ತಾಕೀತು ಮಾಡಿದರು.ಗದಗ ನಗರಕ್ಕೆ 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಸಿಂಗಟಾಲೂರು ಬ್ಯಾರೇಜ್ನಲ್ಲಿ 1.98 ಟಿಎಂಸಿ ನೀರಿದ್ದು, ಭದ್ರಾ ಡ್ಯಾಂನಿಂದ ನೀರು ಬಿಡಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ನಗರಸಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಡಿಸಿ ಸಿ.ಎನ್.ಶ್ರೀಧರ್, ಜಿಪಂ ಸಿಇಒ ಮುಕುಲ್ ಜೈನ್, ಎಸ್ಪಿ ಮಿಥುನ್ ಎಚ್.ಎನ್., ಡಿಸಿಎಫ್ ಸಂತೋಷ ಕುಮಾರ, ಎಡಿಸಿ ಡಾ. ದುರುಗೇಶ್ ಕೆ.ಆರ್. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.ಗದಗ ಜಿಲ್ಲೆಯ ಅಧಿಕಾರಿಗಳು ಎಫಿಶಿಯೆಂಟ್ ಆಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ನನಗೆ ತೃಪ್ತಿ ತಂದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಸಭೆಯಲ್ಲಿ ಸಚಿವರ ನಾನು ಮೊದಲೇ ಹೇಳಿದ್ದೆ ರಾಗ; ಅಧಿಕಾರಿಗಳ ಸಬ್ಮಿಷನ್ ವರಸೆ !ಕೆಡಿಪಿ ಸಭೆಯುದ್ದಕ್ಕೂ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದಾಗಲೆಲ್ಲಾ, ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಮಧ್ಯಪ್ರವೇಶಿಸಿ, ನಾನು ಕೆಡಿಪಿ ಸಭೆಗೂ ಮೊದಲೇ ನಡೆಸಿದ ಸಭೆಯಲ್ಲಿ ಇದನ್ನೆಲ್ಲಾ ಹೇಳಿದ್ದೇನೋ ಇಲ್ಲವೋ ? ಈಗ ಶಾಸಕರು ಕೇಳುತ್ತಿರುವ ಪ್ರಶ್ನೆಯನ್ನು ನಾನು 15 ದಿನಗಳ ಹಿಂದೆಯೇ ನಿಮಗೆ ಕೇಳಿದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದರು. ಸಚಿವರು ಚಿಕ್ಕ ಮಕ್ಕಳಂತೆ ಇದನ್ನು ನಾನೇ ಮಾಡಿದ್ದೇನಲ್ಲ ಎಂದು ಹೇಳಿಕೊಳ್ಳುತ್ತಿದ್ದ ರೀತಿ ಸಭೆಯಲ್ಲಿ ಹಾಸ್ಯಾಸ್ಪದ ವಾತಾವರಣ ನಿರ್ಮಿಸಿತು. ಇತ್ತ ಸಚಿವರು ಹೀಗೆನ್ನುತ್ತಿದ್ದಂತೆ ಅಧಿಕಾರಿಗಳು ಸರ್, ನಮ್ಮದೊಂದು ಸಬ್ಮಿಷನ್... ಎನ್ನುತ್ತಾ ಸಬೂಬು ನೀಡುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ಎಂಎಲ್ಸಿ ಮಾತಿಗೆ ಕಿಮತ್ತಿಲ್ವಾ ?ಸಭೆಯಲ್ಲಿ ಗದಗ ನಗರದ ಅಮರೇಶ್ವರ ನಗರಕ್ಕೆ ನೀರು ಪೂರೈಕೆಗಾಗಿ ಒಂದು ಕೊಳವೆಬಾವಿ ಕೊರೆಸುವಂತೆ ಡಿಸಿ ಅವರಿಗೆ ಹಲವಾರು ಮನವಿ ಮಾಡಿದ್ದೇನೆ, ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲಾ.. ಎಂಎಲ್ಸಿಗೆ ಮಾತಿಗೆ ಕಿಮ್ಮತ್ತೇ ಇಲ್ವಾ ? ಎಂದು ವಿಪ ಸದಸ್ಯ ಎಸ್.ವಿ.ಸಂಕನೂರ ಆಕ್ರೋಶ ವ್ಯಕ್ತ ಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಎಚ್.ಕೆ.ಪಾಟೀಲ ನೀವ್ಯಾಕೆ ಡಿಸಿಗೆ ಹೇಳಾಕ್ ಹೋಗಿದ್ರಿ.. ನನಗ್ ಹೇಳಿದ್ರ್.. ನಾನೇ ಹಾಕ್ಸಿ ಕೊಡತಿದ್ದೆ ಎಂದಾಗ ಸಭೆ ನಗೆಯಲ್ಲಿ ತೇಲಿತು.