ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಕಚೇರಿಗೆ ಸೇರಿದ ಕಡತಗಳನ್ನು ಮದ್ದೂರು ನಗರಸಭೆ ಕಚೇರಿಗೆ ಸಾಗಿಸಲು ಅಧಿಕಾರಿಗಳು ಹುನ್ನಾರ ನಡೆಸುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಧರಣಿನಿರತರು ಬುಧವಾರದಿಂದ ಅಹೋರಾತ್ರಿ ನಡೆಸಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಕಚೇರಿಗೆ ಸೇರಿದ ಕಡತಗಳನ್ನು ಮದ್ದೂರು ನಗರಸಭೆ ಕಚೇರಿಗೆ ಸಾಗಿಸಲು ಅಧಿಕಾರಿಗಳು ಹುನ್ನಾರ ನಡೆಸುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಧರಣಿನಿರತರು ಬುಧವಾರದಿಂದ ಅಹೋರಾತ್ರಿ ನಡೆಸಲು ಮುಂದಾಗಿದ್ದಾರೆ.

ಗೆಜ್ಜಲಗೆರೆ ಗ್ರಾಪಂ ಕಚೇರಿಯಲ್ಲಿದ್ದ ಕಡತಗಳನ್ನು ಪಿಡಿಒ ವೆಂಕಟಯ್ಯ ಹಾಗೂ ಸಿಬ್ಬಂದಿ ರಾತ್ರೋರಾತ್ರಿ ಸಾಗಿಸಿ ನಗರಸಭೆ ವಶಕ್ಕೆ ನೀಡಲು ಮುಂದಾಗಿರುವುದು ಬಗ್ಗೆ ಎಚ್ಚೆತ್ತ ಚಳವಳಿನಿರತರು ಕಡತ ದಾಸ್ತಾನು ಕೊಠಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಸೇರ್ಪಡೆ ಮಾಡಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗೆಜ್ಜಲಗೆರೆ ಗ್ರಾಮದಲ್ಲಿ ರೈತ ಪರ ಹೋರಾಟಗಾರ್ತಿ ಸುನಂದ ಜಯರಾಂ ನೇತೃತ್ವದಲ್ಲಿ ಜನಪ್ರತಿನಿಧಿಗಳು, ರೈತರು ಹಾಗೂ ಗ್ರಾಮಸ್ಥರು ಕಳೆದ 65 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಪ್ರತಿರೋಧವನು ಲೆಕ್ಕಿಸದೆ ಈಗಾಗಲೇ ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮಗಳ ಗ್ರಾಪಂ ಕಚೇರಿಯ ನಾಮಫಲಕಗಳನ್ನು ಮದ್ದೂರು ನಗರಸಭೆ ಕಾರ್ಯಾಲಯ ಎಂದು ಬದಲಾವಣೆ ಮಾಡಿದ್ದಾರೆ. ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡುವ ಬಗ್ಗೆ ಆಕ್ಷೇಪಣಾ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿರುವ ಕಾರಣ ಈ ಎರಡು ಗ್ರಾಮಗಳ ನಾಮಫಲಕ ಬದಲಾವಣೆಗೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಹೇಳಲಾಗಿದೆ.

ಈ ಮಧ್ಯೆ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಒಳಗಾದ ಗ್ರಾಪಂ ಪಿಡಿಒ ವೆಂಕಟಯ್ಯ ಹಾಗೂ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಗ್ರಾಪಂಗೆ ಸೇರಿದ ನರೇಗಾ ಯೋಜನೆ, ಈ ಸ್ವತ್ತು, ಅಳತೆ, ಲೈಸೆನ್ಸ್ ಮತ್ತು ಗ್ರಾಮದ ನಿರ್ವಹಣೆ ಸೇರಿದ ಕಡತಗಳನ್ನು ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿ ಸಾಗಾಣಿಕೆ ಮಾಡಿ ಮದ್ದೂರು ನಗರಸಭೆ ವಶಕ್ಕೆ ನೀಡಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಚಳವಳಿಕಾರರು ಹಗಲು ಹೊತ್ತಿನ ಧರಣಿಯನ್ನು ರಾತ್ರಿಗೂ ವಿಸ್ತರಣೆ ಮಾಡಿಕೊಂಡು ಹೋರಾಟಕ್ಕೆ ಇಳಿದಿರುವುದು ಚಳವಳಿ ತೀವ್ರಗೊಳ್ಳುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.

ಧರಣಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಪರ ಹೋರಾಟಗಾರ್ತಿ ಸುನಂದ ಜಯರಾಂ, ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಮಗಳನ್ನು ಸೇರ್ಪಡೆ ವಿರೋಧಿಸಿ ಕಳೆದ 65 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ನಗರಸಭೆಗೆ ಸೇರ್ಪಡೆ ವಿವಾದ ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥ್ಯವಾಗಿಲ್ಲ. ಶಾಸಕ ಉದಯ್ ಅವರ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಪಂ ಕಡತಗಳನ್ನು ಮದ್ದೂರು ನಗರಸಭೆ ವಶಕ್ಕೆ ನೀಡಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ ನಮ್ಮ ನಿರಂತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಜನಪ್ರತಿನಿಧಿಗಳು ಜಿಲ್ಲಾಡಳಿತ ಹೊ ಣಿಯಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ, ಡಿ.ಕೆ.ಗುರುಮೂರ್ತಿ, ಜಿ.ಪಿ.ರಾಮಲಿಂಗಯ್ಯ, ಲಿಂಗಪ್ಪಾಜಿ, ಜಿ.ಟಿ.ಚಂದ್ರಶೇಖರ್, ಜಿ.ಎ.ಶಂಕರ್, ಜಿ.ಪಿ.ಯೋಗೇಶ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.