ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಂದ ವಂಚಿತರಾದವರನ್ನು ಗುರುತಿಸಿ ನೆರವು ನೀಡಬೇಕು. ಶ್ರೀಮಂತರು ಬಂದಾಗ ಮಾತ್ರ ತುರ್ತಾಗಿ ಕೆಲಸ ಮಾಡಿ, ಬಡವರನ್ನು ನಿರ್ಲಕ್ಷಿಸುವ ಮನೋಭಾವ ಅಧಿಕಾರಿಗಳಲ್ಲಿ ಇರಬಾರದು.
ಹುಬ್ಬಳ್ಳಿ:
ಜನರ ಸಮಸ್ಯೆ ಆಲಿಸಿ, ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಆರಂಭಿಸಿರುವ "ಪ್ರಜಾಸೇವಾ ಆಂದೋಲನ " ವಿನೂತನ ಕಾರ್ಯಕ್ರಮವಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸೇವೆ ನೀಡುವ ಬದಲು ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ ಕಾಲಮಿತಿಯಲ್ಲಿ ಪರಿಹರಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.ಇಲ್ಲಿನ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಹುಬ್ಬಳ್ಳಿ ಶಹರ ತಾಲೂಕಿನ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು.
ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಂದ ವಂಚಿತರಾದವರನ್ನು ಗುರುತಿಸಿ ನೆರವು ನೀಡಬೇಕು. ಶ್ರೀಮಂತರು ಬಂದಾಗ ಮಾತ್ರ ತುರ್ತಾಗಿ ಕೆಲಸ ಮಾಡಿ, ಬಡವರನ್ನು ನಿರ್ಲಕ್ಷಿಸುವ ಮನೋಭಾವ ಅಧಿಕಾರಿಗಳಲ್ಲಿ ಇರಬಾರದು. ಮಾನವೀಯ ದೃಷ್ಟಿಯಿಂದ ಜನರ ಸಮಸ್ಯೆ ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಬಹುದು. ದೂರುಗಳ ವಿಲೇವಾರಿ ನೇರವಾಗಿ ಮುಖ್ಯಮಂತ್ರಿಗಳ ಮಟ್ಟದಲ್ಲೂ ಪರಿಶೀಲನೆಯಾಗಲಿದ್ದು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಸೇವಾ ಆಂದೋಲನ ಕೇವಲ ಫೋಟೊ ಕಾರ್ಯಕ್ರಮವಾಗದೆ, ಜನರ ಸಮಸ್ಯೆಗಳಿಗೆ ನೈಜ ಪರಿಹಾರ ನೀಡುವ ವೇದಿಕೆಯಾಗಬೇಕು. ಕಾರ್ಯಕ್ರಮದ ಕುರಿತು ಮನೆಮನೆಗೆ ಜಾಗೃತಿ ಮೂಡಿಸಬೇಕು ಎಂದರು.ಈ ವೇಳೆವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಬಳಿಕ ಸಾರ್ವಜನಿಕರ ಅಹವಾಲು ಆಲಿಸಲಾಯಿತು. ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ, ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ, ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಸೇರಿದಂತೆ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರಿದ್ದರು.