ಧಾರವಾಡ:
ಸಾರ್ವಜನಿಕರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಯ ಬಗ್ಗೆ ಮಾಹಿತಿ ಸುಲಭವಾಗಿ ಸಿಗಬೇಕು. ಆ ಮೂಲಕ ನಾಗರಿಕ ಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಭೆ ಜರುಗಿಸಿದ ಅವರು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿ ಕೊರತೆ ಆಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಲು ತಿಳಿಸಿದರು. ಎಲ್ಲ ರೈತರಿಗೆ ಕಡ್ಡಾಯವಾಗಿ ಫ್ರೂಟ್ಸ್ ಐಡಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕ್ರಮಕೈಗೊಳ್ಳಬೇಕು ಎಂದರು.
ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಹೊಲಗಳಿಗೆ ರಸ್ತೆ ನಿರ್ಮಾಣ ಮಾಡಬೇಕು. ಗ್ರಾಮೀಣ ಭಾಗದ ರಸ್ತೆ, ಸೇತುವೆ ಗುಣಮಟ್ಟವಾಗಿರುವ ಬಗ್ಗೆ ಗಮನಹರಿಸಿ. ಹಳೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ 56,593 ಇ-ಪೌತಿ ಖಾತೆಗಳಿವೆ. ಅದರಲ್ಲಿ 12,519 ಬಾಕಿ ಇ-ಪೌತಿ ಖಾತೆಗಳಿವೆ. ಅವುಗಳನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದ ಅವರು, ಮರಣ ಹೊಂದಿದವರ ಕುರಿತು ಮಾಹಿತಿ ಪಡೆದುಕೊಂಡು, ಖಾತೆಗಳ ಬದಲಾವಣೆಗೆ ಮುಂದಿನ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡಿ ಉದ್ಯಾನವನದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಆರೋಗ್ಯ, ಕೃಷಿ, ತೋಟಗಾರಿಕೆ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಮಸ್ಯೆ ಪರಿಹರಿಸಿಕೊಳ್ಳಬೇಕು. ನಿರುದ್ಯೋಗ ಸಮಸ್ಯೆಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕು. ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಎಸಿ ಶಾಲಂ ಹುಸೇನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.