ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಜಲ ಜೀವನ್ ಮಿಷನ್ ಯೋಜನೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರಣದಿಂದಾಗಿ ಸಂಪೂರ್ಣ ವಿಫಲಗೊಂಡಿದೆ. ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆದಿವೆ ಎಂದು ಮಾಜಿ ಸಚಿವ ಹಾಗೂ ಔರಾದ್ ಶಾಸಕ ಪ್ರಭು ಚವ್ಹಾಣ್ ಆರೋಪಿಸಿದ್ದಾರೆ.ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬುಧವಾರ ಮನವಿ ಸಲ್ಲಿಸಿ ಔರಾದ್ (ಬಿ) ಮತಕ್ಷೇತ್ರದಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯುಂಟಾಗಿ ಜನತೆ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರದ ಮೇಲೆ ಒತ್ತಡ ತಂದು ಜಲ ಜೀವನ್ ಮಿಷನ್ ಯೋಜನೆಗೆ ಅನುದಾನ ತಂದು ಕ್ಷೇತ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಸದರಿ ಯೋಜನೆಯಡಿ ಔರಾದ್ (ಬಿ) ಹಾಗೂ ಕಮಲನಗರ ತಾಲೂಕುಗಳಲ್ಲಿ ಒಟ್ಟು 276 ಕಾಮಗಾರಿಗಳು ಮಂಜೂರಾಗಿದ್ದು, ಈ ಪೈಕಿ ಫೇಸ್- 1 ರಲ್ಲಿ 35, ಫೇಸ್- 2ರಲ್ಲಿ 28, ಫೇಸ್- 3ರಲ್ಲಿ 131 ಹಾಗೂ ಫೇಸ್- 4ರಲ್ಲಿ 82 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೆಡೆ ಕೆಲಸ ಪೂರ್ಣಗೊಂಡಿದ್ದು ಇನ್ನೂ ಕೆಲವೆಡೆ ಕೆಲಸ ನಡೆಯುತ್ತಿದೆ. ಆರಂಭದಿಂದಲೂ ಕಾಮಗಾರಿಯ ಬಗ್ಗೆ ದೂರುಗಳು ಬರುತ್ತಿವೆ. ಬಹುತೇಕ ಕಡೆ ಕಾಮಗಾರಿ ಪೂರ್ಣಗೊಂಡರೂ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳನ್ನು ಸರಿಪಡಿಸದೇ ಬಿಡಲಾಗಿದೆ. ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ, ನೀರು ಸೋರಿಕೆಯಾಗುತ್ತಿದೆ, ಎಲ್ಲ ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ, ಕೆಲವು ಗ್ರಾಮಗಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿಲ್ಲ, ಬಾವಿ ನಿರ್ಮಿಸಿಲ್ಲ ಅಂದಾಜು ಪಟ್ಟಿಯಂತೆ ಕೆಲಸ ಮಾಡಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳೊಂದಿಗೆ ಜನತೆ ನನ್ನ ಬಳಿಗೆ ಬರುತ್ತಿದ್ದಾರೆ ಎಂದರು.ಗ್ರಾಮ ಸಂಚಾರದ ಸಂದರ್ಭದಲ್ಲಿ ಯಾವ ಊರಿಗೆ ಭೇಟಿ ನೀಡಿದರೂ ಜನರಿಂದ ಹೆಚ್ಚಾಗಿ ಜೆಜೆಎಂ ಲೋಪಗಳ ಕುರಿತ ದೂರುಗಳೇ ಕೇಳಿ ಬರುತ್ತಿವೆ. ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿಗಳ ಈ ಮಹಾತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದಾರೆ. ಕಾಮಗಾರಿ ವೇಳೆ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡದೇ ಬಿಡಲಾಗಿದೆ. ಕೆಲವೆಡೆ ಚರಂಡಿಯಲ್ಲಿಯೇ ಪೈಪ್, ವಾಲ್ ಮತ್ತು ನಳಗಳನ್ನು ಅಳವಡಿಸಲಾಗಿದೆ. ಓವರ್‌ಹೆಡ್ ಟ್ಯಾಂಕ್ (ಓಎಚ್‌ಟಿ) ಕಳಪೆ ಮಟ್ಟದಲ್ಲಿದ್ದು, ಸೋರಿಕೆಯಾಗುತ್ತಿವೆ ಎಂದಿದ್ದಾರೆ.
ಕೆಲವು ಗ್ರಾಮಗಳಲ್ಲಿ ತೆರೆದ ಬಾವಿ ನಿರ್ಮಾಣ ಕಾರ್ಯ ಖಾಸಗಿಯವರ ಜಮೀನಿನಲ್ಲಿ ಮಾಡಿದ್ದು, ಆ ಜಮೀನು ಇಲಾಖೆ ಅಧೀನಕ್ಕೆ ಪಡೆದಿರುವುದಿಲ್ಲ. ಕಾಮಗಾರಿಯಲ್ಲಿ ಕಳಪೆ ಸಾಮಗ್ರಿಗಳನ್ನು ಬಳಕೆ ಮಾಡಿದ್ದಾರೆ. ಹಲವು ಗ್ರಾಮಗಳಲ್ಲಿ ಕೆಲಸವನ್ನು ಸರಿಯಾಗಿ ಪರಿಶೀಲಿಸದೇ ಕಾಮಗಾರಿಯನ್ನು ಪಂಚಾಯತ್ ಅಧೀನಕ್ಕೆ ಪಡೆಯಲಾಗಿದೆ ಎನ್ನುವ ದೂರುಗಳಿವೆ.ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಗುತ್ತಿಗೆದಾರರ ನಿಷ್ಕಾಳಜಿಯಿಂದಾಗಿ ಗ್ರಾಮೀಣ ಭಾಗದಲ್ಲಿನ ಎಲ್ಲ ಮನೆಗಳಿಗೆ ನೀರು ಪೂರೈಸುವ ಯೋಜನೆ ವಿಫಲವಾಗುತ್ತಿದೆ. ಔರಾದ್ (ಬಿ) ಹಾಗೂ ಕಮಲನಗರ ತಾಲೂಕುಗಳಲ್ಲಿ ನಡೆದ ಜೆಜೆಎಂ ಕಾಮಗಾರಿಗಳ ಬಗ್ಗೆ ಪ್ರತ್ಯೇಕ ಅಧಿಕಾರಿಗಳ ತಂಡದಿಂದ ತನಿಖೆ ಮಾಡಿಸಬೇಕು. ಕಾಮಗಾರಿ ಕಳಪೆಯಾದ ಕಡೆಗಳಲ್ಲಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಕಾಮಗಾರಿ ಪುನಃ ಮಾಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.