ಸಾರ್ವಜನಿಕ ಕೆಲಸ ಮಾಡಲು ಅಧಿಕಾರಿಗಳ ಕಾಲಹರಣ: ಪುರಸಭೆ ಸದಸ್ಯರ ಆರೋಪ

| Published : Jul 10 2024, 12:42 AM IST

ಸಾರ್ವಜನಿಕ ಕೆಲಸ ಮಾಡಲು ಅಧಿಕಾರಿಗಳ ಕಾಲಹರಣ: ಪುರಸಭೆ ಸದಸ್ಯರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಕೆಲಸ-ಕಾರ್ಯ ಮಾಡಿಕೊಡುವಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಜನರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಸದಸ್ಯರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಾರ್ವಜನಿಕರ ಕೆಲಸ-ಕಾರ್ಯ ಮಾಡಿಕೊಡುವಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಜನರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಸದಸ್ಯರು ಗಂಭೀರ ಆರೋಪ ಮಾಡಿದರು.

ಪುರಸಭೆ ಸಭಾಭವನದಲ್ಲಿ ಸೋಮವಾರ ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬಹುತೇಕ ಸದಸ್ಯರು, ಸಾರ್ವಜನಿಕರ ಕೆಲಸ ಮಾಡಿಕೊಡಲು ಸಿಬ್ಬಂದಿ ವಿನಾಕಾರಣ ಸತಾಯಿಸುತ್ತಿದ್ದಾರೆ. ವಿವಿಧ ಆಸ್ತಿ ತೆರಿಗೆಗಳ ಚಲನ್‌ ಪಾವತಿ ನೀಡಲು ವಿಳಂಬ ಮಾಡುತ್ತಿದ್ದಾರೆ. ನೀರಿನ ಕರ ಆಕರಣೆಗೆ ಹಿನ್ನೆಡೆಯಾಗಿದೆ. ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರು ಸಮಯ ಪರಿಪಾಲನೆ ಮಾಡುತ್ತಿಲ್ಲ. ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ. ಜನನ-ಮರಣ ಪ್ರಮಾಣಪತ್ರ ನೀಡಲು ಸತಾಯಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಂತಾಗಿದೆ ಎಂದು ಸದಸ್ಯರು ಆರೋಪಿಸಿದರು.

ಪಟ್ಟಣದ ವಿವಿಧ ಕಡೆಗಳಲ್ಲಿ ಅತಿಕ್ರಮಣ ಜಾಗ ತೆರವುಗೊಳಿಸಬೇಕು. ಪೌರ ಕಾರ್ಮಿಕರು ಅನ್ಯ ಇಲಾಖೆಯ ಕೆಲಸ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಏಜೆಂಟರ್ ಹಾವಳಿ ಮೀತಿ ಮೀರಿದ್ದು, 15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆ, ಎಸ್‌ಡಿಪಿ ಯೋಜನೆಯಡಿ ಮಂಜೂರಾದ ವಿವಿಧ ಕಾಮಗಾರಿಗಳನ್ನು ಆರಂಭಿಸುತ್ತಿಲ್ಲ ಎಂದು ಸದಸ್ಯರು ದೂರಿದರು.

ಶಾಸಕ ನಿಖಿಲ್ ಕತ್ತಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸದಸ್ಯರು ಕೈಜೋಡಿಸಬೇಕು. ಬಾಕಿ ಇರುವ ವಿವಿಧ ತೆರಿಗೆಗಳನ್ನು ಬರುವ 15 ದಿನದೊಳಗಾಗಿ ಆಕರಿಸಬೇಕು. ತ್ಯಾಜ್ಯ ನೀರು ಸರಾಗವಾಗಿ ಸಾಗಲು ಚರಂಡಿ ಸ್ವಚ್ಛತೆಗೊಳಿಸಬೇಕು ಎಂದು ತಾಕೀತು ಮಾಡಿದರು.

ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮಾಜಿ ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ರಾಜು ಮುನ್ನೋಳಿ, ಮಹಾಂತೇಶ ತಳವಾರ, ಇಮ್ರಾನ್ ಮೋಮಿನ್, ಚಂದು ಮುತ್ನಾಳೆ ಮತ್ತಿತರರು ಉಪಸ್ಥಿತರಿದ್ದರು.

ಸಂಕೇಶ್ವರ ಠಾಣೆ ಕ್ಷೇತ್ರದಲ್ಲಿಲ್ಲವೇ ?:

ಸಭಯಲ್ಲಿ ಸಂಕೇಶ್ವರ ಪೊಲೀಸ್ ಠಾಣೆ ಹುಕ್ಕೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಶಾಸಕ ನಿಖಿಲ್ ಕತ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ನಡೆಸುವ ಯಾವುದೇ ಸಭೆಗಳಿಗೆ ಸಂಕೇಶ್ವರ ಠಾಣೆಯ ಸಿಪಿಐ, ಪಿಎಸ್‌ಐ ಬರುತ್ತಿಲ್ಲ. ಈ ಠಾಣೆ ತಮ್ಮ ಕ್ಷೇತ್ರಕ್ಕೆ ಬರುವುದಿಲ್ಲವೇ ಎಂದು ಗರಂ ಆದ ಶಾಸಕರು, ಸಂಕೇಶ್ವರದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕ್ಷೇತ್ರದಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಬೇಕು. ಹಿರಣ್ಯಕೇಶಿ ನದಿಯಿಂದ ನೆರೆ ಹಾವಳಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ ಜನ-ಜಾನುವಾರು ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಕಾಳಜಿ ಕೇಂದ್ರ, ಗೋಶಾಲೆ ತೆರೆಯಬೇಕು ಎಂದು ಸೂಚಿಸಿದರು.

ತಹಸೀಲ್ದಾರ್‌ ಮಂಜುಳಾ ನಾಯಕ, ಇಒ ಪ್ರವೀಣ ಕಟ್ಟಿ, ಸಿಪಿಐ ಮಹಾಂತೇಶ ಬಸಾಪೂರ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ನರೇಗಾ ಸಹಾಯಕ ನಿರ್ದೇಶಕ ರಾಜು ಡಾಂಗೆ ಮತ್ತಿತರರು ಉಪಸ್ಥಿತರಿದ್ದರು.