ಕನ್ನಡಪ್ರಭ ವಾರ್ತೆ ಮಂಡ್ಯ
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮೇ ೨೧ ಹಾಗೂ ೨೨ರಂದು ಮಂಡ್ಯಕ್ಕೆ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಆಗಮಿಸಿದ್ದ ವೇಳೆ ದಿಢೀರ್ ಭೇಟಿ ನೀಡಿದ ಬಾಲಕಿಯರ ವಿದ್ಯಾರ್ಥಿನಿಲಯಗಳು ಹಾಗೂ ಜಲ ಶುದ್ಧೀಕರಣ ಘಟಕಗಳಲ್ಲಿ ಕಂಡುಬಂದ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (ಸ್ನಾತಕೋತ್ತರ ಪದವಿ) ನಿಲಯಪಾಲಕಿ ಲತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ್ ವಡ್ಡರ್, ಉಪ ನಿರ್ದೇಶಕ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ, ಮಹರ್ಷಿ ವಾಲ್ಮೀಕಿ ಎಸ್‌ಟಿ ಬಾಲಕಿಯರ ವಿದ್ಯಾರ್ಥಿನಿಲಯದ ವಾರ್ಡನ್ ವೈ.ಡಿ.ನಿರ್ಮಲಾ, ಜಲಶುದ್ಧೀಕರಣ ಘಟಕ ಪ್ರಕರಣದಲ್ಲಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರೆ ಎನ್.ಮೇಘಾ, ಕಾರ್ಯಪಾಲಕ ಅಭಿಯಂತರ ಬಾಬುಸಾಬ್ ನಡಾಫ್, ತಾಪಂ ಇಓ, ತೂಬಿನಕೆರೆ ಗ್ರಾಪಂ ಪಿಡಿಓ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ, ಸಣ್ಣ ನೀರಾವಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರಕರಣದಲ್ಲಿ ವಾರ್ಡನ್ ಬಿ.ಎಲ್.ಗೀತಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿ ನಿಲಯಗಳಲ್ಲಿನ ಲೋಪಗಳೇನು?ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ (ಸ್ನಾತಕೋತ್ತರ ಪದವಿ)ಕ್ಕೆ ಭೇಟಿ ನೀಡಿದಾಗ ೧೦೦ ವಿದ್ಯಾರ್ಥಿಗಳಿಗೆ ಮಂಜೂರಾದ ವಸತಿ ನಿಲಯದಲ್ಲಿ ೧೪೪ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಕೊಠಡಿಗಳ ಕಿಟಕಿಗಳಿಗೆ ಮೆಸ್ ಇರುವುದಿಲ್ಲ. ಊಟ-ಉಪಹಾರ ರುಚಿಕರವಾಗಿರುವುದಿಲ್ಲ. ಉಪಹಾರಕ್ಕೆ ದೋಸೆ, ಇಡ್ಲಿ ನೀಡುತ್ತಿದ್ದು, ಬೇರೆ ಆಹಾರ ನೀಡುತ್ತಿಲ್ಲ. ಹಾಸಿಗೆಗಳು ಕಿತ್ತುಹೋಗಿದ್ದು, ಹೊದಿಕೆ, ತಲೆದಿಂಬು ಇರುವುದಿಲ್ಲ. ನಿಲಯದಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಇರುವುದಿಲ್ಲ. ವಿದ್ಯಾರ್ಥಿನಿಯರು ಅನಾರೋಗ್ಯಕ್ಕೊಳಗಾದರೆ ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಇಲ್ಲ. ಕುಡಿಯಲು ಮತ್ತು ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇರುವುದಿಲ್ಲ. ೧೪೪ ವಿದ್ಯಾರ್ಥಿನಿಯರಿಗೆ ೧೦೦೦ ಲೀಟರ್ ಸಾಮರ್ಥ್ಯದ ಒಂದೇ ಸೋಲಾರ್ ಇರುವುದಾಗಿ ಹಾಗೂ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ ಪುಸ್ತಕಗಳನ್ನು ಇಟ್ಟಿರುವುದಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದರು.
ಶೌಚಾಳಯಗಳು ಸ್ವಚ್ಛಗೊಳಿಸಲು ೬ ಜನರು ಕ್ಲೀನಿಂಗ್‌ಗೆ ಇರುವುದಾಗಿ ವಾರ್ಡನ್ ತಿಳಿಸಿದ್ದರೂ ಶೌಚಾಲಯಗಳಲ್ಲಿ ಸ್ವಚ್ಛತೆ ಇರಲಿಲ್ಲ. ನಿಲಯದ ಸುತ್ತಮುತ್ತ ನಾಯಿಗಳ ಕಾಟ, ಕಳೆದೆರಡು ತಿಂಗಳಿನಿಂದ ಸ್ಯಾನಿಟರಿ ಪ್ಯಾಡ್ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ನಿಲಯಕ್ಕೆ ಎಷ್ಟು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಉತ್ತೀರ್ಣಗೊಂಡವರೆಷ್ಟು, ಉತ್ತೀರ್ಣಗೊಂಡ ವಿದ್ಯಾರ್ಥಿನಿಯರ ಫಲಿತಾಂಶದ ವಿವರಗಳನ್ನು ತರಗತಿವಾರು ಸಲ್ಲಿಸುವಂತೆ ಉಪ ಲೋಕಾಯುಕ್ತರು ಆದೇಶಿದ್ದಾರೆ.
ಓಡಾಡುವುದಕ್ಕೆ ಜಾಗದ ಕೊರತೆ:ಮಹರ್ಷಿ ವಾಲ್ಮೀಕಿ ಎಸ್‌ಟಿ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಒಟ್ಟು ೯೭ ವಿದ್ಯಾರ್ಥಿನಿಯರಿದ್ದು, ಬಾಡಿಗೆ ಕಟ್ಟಡದಲ್ಲಿದ್ದು ೯೭ ವಿದ್ಯಾರ್ಥಿನಿಯರು ಇರಲು ತುಂಬಾ ಚಿಕ್ಕದಾಗಿದೆ. ವಿದ್ಯಾರ್ಥಿನಿಯರು ಸರಾಗವಾಗಿ ಓಡಾಡಲು ಅವರಿಗೆ ನೀಡಿರುವ ಮಂಚಗಳಿಗೆ ತಲುಪಲು ಜಾಗದ ಕೊರತೆ ಇರುವುದು ಎದ್ದು ಕಾಣುತ್ತಿತ್ತು. ವಿದ್ಯಾರ್ಥಿನಿಯರಿಗೆ ಡೈನಿಂಗ್ ಹಾಲ್ ಇರುವುದಿಲ್ಲ. ಓದಲು ಕೊಠಡಿ ಇರುವುದಿಲ್ಲ. ವಿದ್ಯಾರ್ಥಿನಿಯರಿಗೆ ಮೂಲಸೌಕರ್ಯವಿಲ್ಲದಿರುವುದು ಕಂಡುಬಂದಿತ್ತು. ವಿದ್ಯಾರ್ಥಿನಿಲಯದಲ್ಲಿ ಸರಿಯಾದ ಅಡುಗೆ ಕೋಣೆ ಇಲ್ಲದೆ, ಅಡುಗೆಗೆ ಉಪಯೋಗಿಸುವ ಪಾತ್ರೆ ಹಾಗೂ ಸಾಮಗ್ರಿಗಳನ್ನು ಇಡಲು ಸೂಕ್ತವಾದ ಸ್ಥಳಾವಕಾಶ ಇರಲಿಲ್ಲ.
6 ತಿಂಗಳಿಗೊಮ್ಮೆ ವಿದ್ಯಾರ್ಥಿನಿಯರಿಗೆ ಅತಿಸಾರ ಬೇದಿ:ಡಾ.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವೂ ೧೦೪ ವಿದ್ಯಾರ್ಥಿನಿಯರಿರಲು ತುಂಬಾ ಚಿಕ್ಕದಾಗಿದೆ. ವಿದ್ಯಾರ್ಥಿನಿಯರಿರಲು ಯೋಗ್ಯ ಕಟ್ಟಡವಾಗಿಲ್ಲ. ಇಕ್ಕಟ್ಟಾದ ಜಾಗದಲ್ಲಿ ವಿದ್ಯಾರ್ಥಿನಿಯರಿದ್ದು ಮಂಚದ ವ್ಯವಸ್ಥೆಲ್ಲ. ಶೌಚಾಲಯಗಳನ್ನು ವಿದ್ಯಾರ್ಥಿನಿಯರೇ ಸ್ವಚ್ಛಗೊಳಿಸುತ್ತಿದ್ದು, ಪ್ರತಿ ೬ ತಿಂಗಳಿಗೊಮ್ಮೆ ವಿದ್ಯಾರ್ಥಿನಿಯರಿಗೆ ಅತಿಸಾರ ಭೇದಿ ಉಂಟಾಗುತ್ತಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದರು.
ಸೀಸಿ ಟೀವಿ ಅಳವಡಿಸಿ ಭದ್ರತೆ ಒದಗಿಸಿ:ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿರುವ ಮಂಡ್ಯ ನಗರಕ್ಕೆ ಮೂರನೇ ಹಂತದ ನೀರು ಸರಬರಾಜು ಯೋಜನೆಗೆ ಸ್ಥಾಪಿಸಿರುವ ೫೧ ದಶ ಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿ ೧೦ ಫಿಲ್ಟರ್ ಬೆಡ್‌ಗಳಿವೆ. ಪ್ರಸ್ತುತ ೨೮ ರಿಂದ ೩೦ ಎಂಎಲ್‌ಡಿ ನೀರು ಶುದ್ಧೀಕರಣಗೊಳ್ಳುತ್ತಿರುವುದಾಗಿ ಹಾಗೂ ೫ ಲೇಯರ್‌ಗಳಲ್ಲಿ ಶುದ್ಧೀಕರಣಗೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನೀರು ಶುದ್ಧೀಕರಣಗೊಂಡ ನಂತರ ಕುಡಿಯಲು ನೀರು ಯೋಗ್ಯವೇ ಎಂಬ ಬಗ್ಗೆ ಪರೀಕ್ಷಿಸಬೇಕು. ಜಲಶುದ್ಧೀಕರಣದ ಘಟಕದ ಸುತ್ತ ಗೋಡೆ ನಿರ್ಮಿಸಿ ಸೀಸಿ ಕ್ಯಾಮರಾ ಅಳವಡಿಸಿ, ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಆದೇಶಿಸಿದ್ದರು.
ಕೋಡಿಶೆಟ್ಟಿಪುರ ಗ್ರಾಮದಲ್ಲಿ ನೀರಿಗೆ ತೊಂದರೆ:ರಾಗಿಮುದ್ದನಹಳ್ಳಿ ಗ್ರಾಮದ ಸರ್ವೆ ನಂ.೧೦೪ರಲ್ಲಿ ೨ ಎಕರೆ ೧೧ ಗುಂಟೆ ವಿಸ್ತೀರ್ಣದಲ್ಲಿರುವ ಕೆರೆ ಬತ್ತಿಹೋಗಿದ್ದು, ಶ್ರೀರಂಗಪಟ್ಟಣ ತಾಲೂಕು ಕೋಡಿಶೆಟ್ಟಿಪುರ ಗ್ರಾಮದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗಿದೆ. ೧೬೦೦ ರಿಂದ ೨ ಸಾವಿರ ಅಡಿಯವರೆಗೆ ಕೊಳವೆಬಾವಿ ನಿರ್ಮಿಸಿದರೂ ನೀರು ಬರುತ್ತಿಲ್ಲ. ಕೆರೆಯನ್ನು ಪುನಶ್ಚೇತನಗೊಳಿಸಲು ಹಾಗೂ ಅಂತರ್ಜಲ ಪುನರಾವೇಶಿಸಲು ಕೆರೆಗೆ ಫಿಲ್ಟರ್ ಬ್ಯಾಕ್ ವಾಶ್ ವಾಟರ್ ಹರಿಯುವಂತೆ ಗ್ರಾಮಸ್ಥರು ಕೋರಿದ್ದು ಅದರಂತೆ ಕ್ರಮ ವಹಿಸುವಂತೆ ಉಪ ಲೋಕಾಯುಕ್ತರು ಅಧಿಕಾರಿಗಳಿಗೆ ಆದೇಶ ಮಾಡಿದ್ದರು.