ಸಹಕಾರ ವ್ಯವಸ್ಥೆ ನಾಶಕ್ಕೆ ಅಧಿಕಾರಿಗಳ ಹುನ್ನಾರ

| Published : Feb 05 2024, 01:45 AM IST

ಸಾರಾಂಶ

ಸಾಲ ವಿತರಣೆ ನಿಂತರೆ ಪಡೆದ ಸಾಲ ಮರುಪಾವತಿಗೆ ಮಹಿಳೆಯರು, ರೈತರು ಮುಂದೆ ಬರಲ್ಲ, ವಿಧಾನಸಭಾ ಚುನಾವಣೆ ನಂತರ ವಸೂಲಾತಿ ಇಲ್ಲ, ಠೇವಣಿ ವಾಪಸ್‌ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ವಿರುದ್ದ ಸೊಸೈಟಿ ಸಿಇಒಗಳು ಧ್ವನಿಯೆತ್ತಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ಸಹಕಾರ ರಂಗದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಇಡೀ ವ್ಯವಸ್ಥೆಯ ಶವಪೆಟ್ಟಿಗೆಗೆ ಕೊನೆಯ ಮೊಳೆಗಳನ್ನು ಹೊಡೆಯಲು ಹುನ್ನಾರನಡೆಸಿದ್ದಾರೆ ಎಂದು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಾಜ್ಯ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆರೋಪಿಸಿದರು.

ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕೋಲಾರ ಜಿಲ್ಲೆಯ ವ್ಯಾಪ್ತಿಯ ಕೃಷಿಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂಕಷ್ಟ ಸ್ಥಿತಿಯಲ್ಲಿ ಡಿಸಿಸಿ ಬ್ಯಾಂಕ್‌ನಂತಹ ಸಹಕಾರಿ ಸಂಸ್ಥೆ ಉಳಿಸಲು ಪ್ಯಾಕ್ಸ್ ಸಿಇಒಗಳು ಕಾವಲುಗಾರರಂತೆ ಕೆಲಸ ಮಾಡಬೇಂದು ಮನವಿ ಮಾಡಿದರು.ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ

ಹೊಸ ಸಾಲ ನೀಡದ ಕಾರಣ ಪಡೆದಿರುವ ಸಾಲ ವಸೂಲಾತಿ ಆಗುತ್ತಿಲ್ಲ, ಸೊಸೈಟಿಗಳನ್ನು ಉಳಿಸಿಕೊಳ್ಳಲು ಪ್ಯಾಕ್ಸ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ, ಆದರೆ ಡಿಸಿಸಿ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗೆ ಆ ಭಯ ಇದ್ದಂತಿಲ್ಲ. ಇಂತಹ ಸಂದರ್ಭದಲ್ಲಿ ಸಹಕಾರಿ ವ್ಯವಸ್ಥೆ ಉಳಿಸಲು ನೀವೇ ಕಾವಲುಗಾರರಾಗಿ ಎಂದು ಕಿವಿಮಾತು ಹೇಳಿದರು.

ಪ್ಯಾಕ್ಸ್ ಉಳಿದರೆ ಡಿಸಿಸಿ ಬ್ಯಾಂಕ್, ಡಿಸಿಸಿ ಬ್ಯಾಂಕುಗಳು ಉಳಿದರೆ ಅಫೆಕ್ಸ್ ಬ್ಯಾಂಕ್ ಉಳಿಯುತ್ತದೆ, ಸಾಲ ವಿತರಣೆ ನಿಂತರೆ ಪಡೆದ ಸಾಲ ಮರುಪಾವತಿಗೆ ಮಹಿಳೆಯರು, ರೈತರು ಮುಂದೆ ಬರಲ್ಲ, ವಿಧಾನಸಭಾ ಚುನಾವಣೆ ನಂತರ ವಸೂಲಾತಿ ಇಲ್ಲ, ಠೇವಣಿ ವಾಪಸ್‌ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ವಿರುದ್ದ ಸೊಸೈಟಿ ಸಿಇಒಗಳು ಧ್ವನಿಯೆತ್ತಬೇಕು ಎಂದರು.

ಡಿಸಿಸಿ ಬ್ಯಾಂಕ್ ಮತ್ತೆ ದುಸ್ಥಿತಿಯತ್ತ

ರಾಜ್ಯ ಸಹಕಾರ ಮಹಮಂಡಳ ನಿರ್ದೇಶಕ ಸಹಕಾರ ರತ್ನ ಪುರಸ್ಕೃತ ಹೆಚ್.ವಿ.ನಾಗರಾಜ್ ಮಾತನಾಡಿ, ೨೦೧೪ರಲ್ಲಿ ಡಿಸಿಸಿ ಬ್ಯಾಂಕ್ ಮುಳುಗಿ ಹೋಗಿತ್ತು. ಗೋವಿಂದಗೌಡರ ನೇತೃತ್ವದ ನಮ್ಮ ಆಡಳಿತ ಮಂಡಳಿ ಕಷ್ಟಪಟ್ಟು ಉಳಿಸಿದ್ದೇವೆ, ಆದರೆ ಇದೀಗ ಕೆಲವರ ರಾಜಕೀಯ ಹಿತಾಸಕ್ತಿಗಾಗಿ ಮತ್ತೆ ಬಲಿಕೊಡುವ ಕೆಲಸವಾಗುತ್ತಿದೆ, ಪ್ಯಾಕ್ಸ್‌ಗಳು ಆದಾಯ ಕ್ರೋಡೀಕರಣ ಮಾಡುವ ಶಕ್ತಿ ಪಡೆದುಕೊಳ್ಳಿ, ಕನಿಷ್ಟ ೫ ಕೋಟಿ ಕೆಸಿಸಿ ಸಾಲ ನೀಡುವ ಶಕ್ತಿ ಹೊಂದಬೇಕು ಎಂದರು.

ಸಹಕಾರ ಮಹಾಮಂಡಳದ ನಿರ್ದೇಶಕ ಎ.ಸಿ.ನಾಗರಾಜ್ ಮಾತನಾಡಿ, ಸಹಕಾರ ಇಲಾಖೆಗೆ ಮತ್ತಷ್ಟು ಹೊಸ ಕಾಯ್ದೆ ತರಲು ಸರ್ಕಾರ ಸಹಕಾರಿಗಳು ಮತ್ತು ಅಧಿಕಾರಿಗಳ ಸಮಿತಿ ರಚಿಸಿದೆ, ಮುಂದಿನ ಅಧಿವೇಶನದಲ್ಲಿ ಇವು ಜಾರಿಯಾಗುವ ಸಾಧ್ಯತೆ ಇದ್ದು, ಕಾಯ್ದೆಗಳ ಕುರಿತು ಅರಿತು ಉತ್ತಮ ಆಡಳಿತ ನಡೆಸಬೇಕು, ರೈತರ ದುಡ್ಡು ತಿಂದರೆ ಏಳ್ಗೆಯಾಗಲ್ಲ ಎಂದು ಎಚ್ಚರಿಸಿದರು.

ಹೊಸ ಕಾಯ್ದೆಗಳ ಅರಿವು ಅಗತ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಸರ್ಕಾರಕ್ಕೆ ಪರ್ಯಾಯವಾಗಿ ಸಹಕಾರಿ ವ್ಯವಸ್ಥೆ ಬೆಳೆದಿದೆ, ಇದರಿಂದ ಸಮಾಜದ ಕಟ್ಟಕಡೆಯ ಬಡವರಿಗೂ ನ್ಯಾಯ ಸಿಗುತ್ತಿದೆ, ಮಹಿಳೆಯರ ಬದುಕು ಹಸನಾಗಿದೆ ಇಂತಹ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಆಗುವ ಹೊಸ ಕಾಯ್ದೆಗಳ ಅರಿವು ಪ್ಯಾಕ್ಸ್‌ಗಳ ಸಿಇಒಗಳಿಗೆ ಅಗತ್ಯ ಎಂದರು.

ಯೂನಿಯನ್ ನಿರ್ದೇಶಕಿ ಆರ್.ಅರುಣ ಮಾತನಾಡಿದರು. ಸಹಕಾರ ಮಹಾಮಂಡಳದ ಕಾರ್ಯದರ್ಶಿ ಲಕ್ಷ್ಮಿಪತಯ್ಯ, ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್.ವಿ.ಬಸವರಾಜಪ್ಪ, ಯೂನಿಯನ್ ಸಿಇಒ ಕೆ.ಎಂ.ಭಾರತಿ ನಿರೂಪಿಸಿ, ಸ್ವಾಗತಿಸಿದ ಕಾರ್ಯಾಗಾರದಲ್ಲಿ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಅ.ಮು.ಲಕ್ಷೀನಾರಾಯಣ, ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಎಸ್.ವಿ.ಗೋವರ್ಧನರೆಡ್ಡಿ, ವಿ.ರಘುಪತಿರೆಡ್ಡಿ, ಎನ್.ಶಂಕರನಾರಾಯಣಗೌಡ, ಎನ್.ನಾಗರಾಜ್, ಪಿ.ಎಂ.ವೆಂಕಟೇಶ್, ಕೆ.ಎಂ.ಮಂಜುನಾಥ್, ಕೆ.ಎಂ.ವೆಂಕಟೇಶಪ್ಪ, ಷೇಕ್ ಅಹಮದ್, ಯೂನಿಯನ್ ವ್ಯವಸ್ಥಾಪಕಿ ಎನ್. ಲಕ್ಷ್ಮೀದೇವಿ ಇದ್ದರು.