ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನೀವು ನನಗೆ ಜವಾಬ್ದಾರಿಯುತ ಸ್ಥಾನ ಕೊಟ್ಟಿದ್ದೀರಿ. ನಾನು ನಿಮಗೆ ಆಭಾರಿಯಾಗಿದ್ದು, ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವುದು ನನ್ನ ಕರ್ತವ್ಯ. ಅದಕ್ಕಾಗಿ ಮೊದಲು ನಾನು ತಿಪಟೂರು ವಿಧಾನಸಭಾ ಕ್ಷೇತ್ರದಿಂದಲೇ ಜನಸಂಪರ್ಕ ಸಭೆಯನ್ನು ಕರೆದಿದ್ದೇನೆ. ಇಲ್ಲಿನ ಅಧಿಕಾರಿಗಳು ಜವಾಬ್ದಾರಿಯಿಂದ ಸಾರ್ವಜನಿಕರನ್ನು ಅಲೆದಾಡಿಸದೇ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಭದ್ರತೆಗಾಗಿ, ರಾಷ್ಟ್ರದ ಭವಿಷ್ಯಕ್ಕಾಗಿ ನೀವು ನನ್ನನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೀರಿ. ನಿಮ್ಮ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿಯೇ ಹೋಗುತ್ತೇನೆ. ಹಳ್ಳಿಗಾಡಿನ ಜನರ ಜೀವನ ಬದಲಾವಣೆಗಾಗಿ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಅರ್ಹರಿಗೆ ತಲುಪುತ್ತಿವೆಯೋ ಎಂಬುದನ್ನು ತಿಳಿಯಲು ಈ ಸಭೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಒಂದು ತಿಂಗಳ ಕಾಲ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಭೇಟಿ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇನೆ. ಕೇಂದ್ರ ನನಗೆ ರೈಲ್ವೆ ಮತ್ತು ನೀರಾವರಿಯ ಜವಾಬ್ದಾರಿ ಕೊಟ್ಟಿದ್ದು, ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ಎಂದರು.
ಈಗಾಗಲೇ ಕಳೆದ ನಾಲ್ಕು ತಿಂಗಳಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದು, ವಿಶೇಷವಾಗಿ ರಾಯದುರ್ಗ, ಪಾವಗಡ, ಮಧುಗಿರಿ, ಕೊರಟಗೆರೆ, ಊರುಕೇರೆ ಇಲ್ಲಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆ ಹಾಗೂ ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ದಾವಣಗೆರೆಯ ಈ ಎರಡೂ ರೈಲ್ವೆ ಯೋಜನೆಗಳು ತುಮಕೂರಿಗೆ ಸಂಬಂಧಪಟ್ಟಿವೆ. ತುಮಕೂರು, ಶಿರಾ, ದಾವಣಗೆರೆ, ಚಿತ್ರದುರ್ಗಕ್ಕೆ ರೈಲು ಓಡಾಡಲು 13- 14 ಲೆವೆಲ್ ಕ್ರಾಸಿಂಗ್‌ಗಾಗಿ ಆದೇಶ ಮಾಡಲಾಗಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿ ಎರಡು ಜನಶತಾಬ್ದಿ ರೈಲುಗಳು ತಿಪಟೂರಿನಲ್ಲಿ ನಿಲುಗಡೆಯಾಗಲಿವೆ. ಅಲ್ಲದೆ ಮೆಮೊ ರೈಲನ್ನು ತುಮಕೂರಿನಿಂದ ಬೆಂಗಳೂರಿಗೆ ಬಿಡಲಾಗಿದ್ದು, ಶೀಘ್ರದಲ್ಲಿ ಮತ್ತೊಂದು ಮೆಮೋ ರೈಲು ಓಡಾಡಲಿದೆ. ಒಟ್ಟು 11 ಯೋಜನೆಗಳಿದ್ದು, ಹತ್ತು ವರ್ಷಗಳಲ್ಲಿ 90 ಸಾವಿರ ಕಿಮೀ ಡಬಲ್ ಲೈನ್‌ಗಳಾಗಿವೆ. ಡೀಸೆಲ್ ರೈಲುಗಳನ್ನು ತೆಗೆದು ಶೇ.98ರಷ್ಟು ಎಲೆಕ್ಟ್ರಿಕಲ್ ರೈಲುಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ರಾಜ್ಯದಲ್ಲಿ ಸುಮಾರು 43 ಸಾವಿರ ಕೋಟಿ ರು.ಗಳಲ್ಲಿ ರೈಲ್ವೆ ಯೋಜನೆಗಳು ನಡೆಯುತ್ತಿದ್ದು, 2027ರೊಳಗೆ ಎಲ್ಲ ಯೋಜನೆಗಳನ್ನು ಪೂರೈಸಲಿದ್ದೇವೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ತುಮಕೂರಿನ ನನ್ನ ಕಚೇರಿಯನ್ನು ಸಂಪರ್ಕಿಸಿ, ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.ಸಭೆಯಲ್ಲಿ ದಕ್ಷಿಣ ನೈರುತ್ಯ ರೈಲ್ವೆ ಇಂಜಿನಿಯರ್ ಸಂಜೀವ ಪರವಾಲ್, ಆನಂದ ಭಾರತಿ, ಮಾಜಿ ಸಚಿವ ಬಿ.ಸಿ. ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾಪಂ ಇಒ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿ ತಾಲೂಕುಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜನಸಂಪರ್ಕ ಸಭೆಯಲ್ಲಿ ಹಲವು ಅಹವಾಲುಗಳು:ಜನಸಂಪರ್ಕ ಸಭೆಯಲ್ಲಿ ನೂರಾರು ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದಿದ್ದರು. ಸರ್ಕಾರದ ಸೌಲಭ್ಯಗಳು ಸೇರಿದಂತೆ ಹಲವಾರು ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳು ನಮ್ಮನ್ನು ಅಲೆದಾಡಿಸುತ್ತಿದ್ದಾರೆಂದು ದೂರು ನೀಡಿದರು. ಬಿಳಿಗೆರೆ ಚಂದ್ರಶೇಖರ್ ಎಂಬುವವರು ಹುಬ್ಬಳ್ಳಿ ಜಂಕ್ಷನ್‌ನಿಂದ ಅರಸೀಕೆರೆ, ತಿಪಟೂರು ಮಾರ್ಗವಾಗಿ ಧಾರ್ಮಿಕ ಸ್ಥಳ ಶ್ರೀ ತಿರುಪತಿ ಕ್ಷೇತ್ರಕ್ಕೆ ಹೊಸದಾಗಿ ರೈಲ್ವೆ ಸೇವೆ ಒದಗಿಸುವಂತೆ ಹಾಗೂ ಮಂಗಳಾ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ತಿಪಟೂರು ಮಾರ್ಗವಾಗಿ ಪುನರ್ ಚಾಲನೆ ಮಾಡುವಂತೆ ಮನವಿ ಮಾಡಿದರು. ತಿಪಟೂರಿನ ಹಾಸನ ವೃತ್ತದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ವಿನಾಯಕ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆನಂದ ಮನವಿ ಮಾಡಿದರು, ಪಶುಪತಿ ಎಂಬುವವರು ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗೆ ಹಣ ಬಿಡುಗಡೆ ಮಾಡಿಸಿಕೊಡುವಂತೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಸ್ಕೈವಾಕ್ ನಿರ್ಮಿಸುವಂತೆ ಪ್ರಾಂಶುಪಾಲ ಎಚ್.ಬಿ. ಕುಮಾರಸ್ವಾಮಿ ಮನವಿ ಮಾಡಿದರು. ತುರುವೇಕೆರೆ ತಾಲೂಕಿನ ದೊಂಬರಹಳ್ಳಿ ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ, ತಾಲೂಕು ಸವಿತಾ ಸಮಾಜದ ಮುಖಂಡರು ಸಂಘಕ್ಕೆ ಸಮುದಾಯ ಭವನ ಪೂರ್ಣಗೊಳ್ಳಲು 15 ಲಕ್ಷ ರು. ಅನುದಾನ ನೀಡುವಂತೆ ಮನವಿ ಸಲ್ಲಿಸಿದರು, ತಿಮ್ಲಾಪುರ ಮತ್ತು ಲಕ್ಮಗೊಂಡನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಡಾ. ಎಲ್.ಎಂ. ವೆಂಕಟೇಶ್ ಮನವಿ ಮಾಡಿದರು. ಹೀಗೆ ಸಂಧ್ಯಾ ಸುರಕ್ಷಾ, ರಸ್ತೆ, ಸಮುದಾಯ ಭವನ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಹೊತ್ತು ತಂದಿದ್ದರು.