ಎಲ್ಲ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯ ಮಾಡಬೇಕು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿದರೆ ಪ್ರಗತಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

ಮುಂಡರಗಿ: ಅಧಿಕಾರಿಗಳು ಸಾಮಾನ್ಯ ಸಭೆಗೆ ನೀಡುವ ಮಾಹಿತಿಯನ್ನು ಮೊದಲೇ ಪರಿಶೀಲಿಸಿ ಸೂಕ್ತ ಮಾಹಿತಿ ಒದಗಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಸೂಚಿಸಿದರು.

ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಜರುಗಿದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಟಾಚಾರಕ್ಕಾಗಿ ವರದಿ ಪ್ರಗತಿಯಲ್ಲಿದೆ, ಸಲ್ಲಿಸಿದೆ, ಪೂರ್ಣವಾಗಿದೆ ಎನ್ನುವುದರ ಜತೆಗೆ ಯಾವ ದಿನದಂದು, ಎಷ್ಟು ಪ್ರಮಾಣದ ಕೆಲಸ ಆಗಬೇಕಿದೆ ಎಂಬ ಪೂರ್ಣಪ್ರಮಾಣದ ಮಾಹಿತಿ ಒಳಗೊಂಡು ವರದಿಯನ್ನು ಸಭೆಗೆ ಸಲ್ಲಿಸಬೇಕು ಎಂದರು.

ಎಲ್ಲ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯ ಮಾಡಬೇಕು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿದರೆ ಪ್ರಗತಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಶ್ರಮ ವಹಿಸಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಪ್ರಧಾನಮಂತ್ರಿ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಇದ್ದು, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ಶೇ. 50ರಷ್ಟು ಸಬ್ಸಿಡಿ ಸಾಲ ಸೌಲಭ್ಯವಿದೆ. ಆಸಕ್ತರು ಅರ್ಜಿ ಸಲ್ಲಿಸಿ ಯೋಜನೆ ಸದುಪಯೋಗ ಪಡೆಯಬಹುದು ಎಂದರು.ಬೆಳೆವಿಮೆ, ಬೆಳೆಸಾಲ, ಕೃಷಿ ಸೌಲಭ್ಯ ಪಡೆಯುವುದಕ್ಕೆ ರೈತರಿಗೆ ಎಫ್‌ಐಡಿ ಸಂಖ್ಯೆ ಅವಶ್ಯ. ಆದ್ದರಿಂದ ರೈತರು ಎಫ್‌ಐಡಿ ಸಂಖ್ಯೆ ಹೊಂದಬೇಕು. ಈ ಕುರಿತು ಕೃಷಿ ಇಲಾಖೆಯಿಂದ ರೈತರಲ್ಲಿ ಜಾಗೃತಿ ಮೂಡಿಸಬೇಕು. ಹಿಂಗಾರು ಬೆಳೆ ಸಮೀಕ್ಷೆ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ತಹಸೀಲ್ದಾ‌ರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಕಾಲದಲ್ಲಿ ಬೆಳೆ ಸಮೀಕ್ಷೆ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಕೃಷಿ ಇಲಾಖೆ ಎಡಿ ಪ್ರಾಣೇಶ ಅವರಿಗೆ ಚೇತನಾ ಪಾಟೀಲ ಸೂಚಿಸಿದರು.

ಪಿಡಬ್ಲ್ಯುಡಿ ಎಇಇ ಬಸವರಾಜ ಇಲಾಖೆ ವರದಿ ಸಲ್ಲಿಸುವಾಗ ಹಾರೋಗೇರಿ ಪಿಡಿಒ ಮಹೇಶ ಮಾತನಾಡಿ, ಹಾರೋಗೇರಿ ಗ್ರಾಮದಲ್ಲಿ ಪಿಡಬ್ಲ್ಯೂಡಿಗೆ ಸಂಬಂಧಿಸಿದ ಹಿರೇವಡ್ಡಟ್ಟಿ ಭಾಗಕ್ಕೆ ತೆರಳುವ ರಸ್ತೆ ಅಗಲೀಕರಣಗೊಳಿಸಿ ಚರಂಡಿ ನಿರ್ಮಾಣ ಮಾಡಿಕೊಡಬೇಕಿದೆ. ಅದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದರು.

ಈ ಬಗ್ಗೆ ಮೌಖಿಕವಾಗಿ ಹೇಳದೆ ಪತ್ರಗಳ ಮೂಲಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಡಳಿತಾಧಿಕಾರಿ ಚೇತನಾ ಪಾಟೀಲ ಪಿಡಿಒಗೆ ಸೂಚಿಸಿದರು. ಅಲ್ಲದೇ ಯಾವುದೇ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಏನೇ ತಾಂತ್ರಿಕ ಸಮಸ್ಯೆ ಇದ್ದರೂ ಸಂಬಂಧಿಸಿದವರಿಗೆ ಪತ್ರ ಬರೆದು ಅಧಿಕೃತ ಪಾರದರ್ಶಕತೆಯಿಂದ ಮಾಹಿತಿ ನೀಡಿ ಕೆಲಸ ಮಾಡಬೇಕು ಎಂದರು.ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ವಿಶ್ವನಾಥ ಹೊಸಮನಿ, ಕಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಹಾದೇವ ಇಸರನಾಳ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಕಲಬುರ್ಗಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೂಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಅಣ್ಣಿಗೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ವಿ. ಕಲ್ಮಠ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.