ಸ್ಮಶಾನ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಗಡವು

| Published : May 10 2025, 01:12 AM IST

ಸಾರಾಂಶ

ಸ್ಮಶಾನಗಳು ಇಲ್ಲದ ಗ್ರಾಮಗಳಿಗೆ ಕೂಡಲೇ ಹತ್ತಿರದ ಸರ್ಕಾರಿ ಭೂಮಿ ಗುರುತಿಸಿ ಕೊಡಬೇಕು, ಅವುಗಳಿಗೆ ಕೂಡಲೇ ಮಂಜೂರು ಮಾಡುತ್ತೇವೆ

ಹೂವಿನಹಡಗಲಿ: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜನ ಶವ ಸಂಸ್ಕಾರ ಮಾಡಲು ಜಾಗ ಇಲ್ಲದೇ ಹೆಣಗಾಡುತ್ತಿದ್ದಾರೆ. ಇದು ತೀರಾ ದುರಂತದ ಸಂಗತಿ,ಈ ಕೂಡಲೇ ಅಧಿಕಾರಿಗಳು ಸ್ಮಶಾನ ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ 10 ದಿನಗಳ ಗಡುವು ನೀಡಿದ್ದಾರೆ.ಇಲ್ಲಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿಯುವ ನೀರು ನಿರ್ವಹಣೆ ಮತ್ತು ಸ್ಮಶಾನಗಳ ಅಭಿವೃದ್ಧಿ ವಿಷಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆಯಲ್ಲಿ 111 ಸ್ಮಶಾನಗಳಿವೆ. ಇವುಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲು ಕೂಡಲೇ ಕ್ರಿಯಾ ಯೋಜನೆ ಮಾಡಬೇಕು, ಕೆಲವು ಸ್ಮಶಾನಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಕ್ರಮ ವಹಿಸಬೇಕೆಂದು ಹೇಳಿದರು.

ಸ್ಮಶಾನಗಳು ಇಲ್ಲದ ಗ್ರಾಮಗಳಿಗೆ ಕೂಡಲೇ ಹತ್ತಿರದ ಸರ್ಕಾರಿ ಭೂಮಿ ಗುರುತಿಸಿ ಕೊಡಬೇಕು, ಅವುಗಳಿಗೆ ಕೂಡಲೇ ಮಂಜೂರು ಮಾಡುತ್ತೇವೆ. ಸರ್ಕಾರಿ ಜಮೀನು ಇಲ್ಲದ ಕಡೆಗಳಲ್ಲಿ ಭೂಮಿ ಖರೀದಿ ಮಾಡಿ ಸ್ಮಶಾನ ನೀಡಲಾಗುತ್ತಿದೆ ಎಂದರು.

ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಮಾಹಿತಿ ಪಡೆದ ಡಿಸಿ,ಪಂಚಾಯಿತಿಗೆ ಮಂಜೂರಾಗಿರುವ 15ನೇ ಹಣಕಾಸು ಯೋಜನೆಯ ಹಣದಲ್ಲಿ ಬೇಕಾಬಿಟ್ಟಿಯಾಗಿ ಕುಡಿವ ನೀರು ನೆಪದಲ್ಲಿ ಕೊಳವೆ ಬಾವಿ ಕೊರೆಯುವಂತಿಲ್ಲ, ಗ್ರಾಮದ ಹತ್ತಿರದ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಬೇಕು, ಜತೆಗೆ ಬಹು ಗ್ರಾಮ ಕುಡಿವ ನೀರಿನ ಯೋಜನೆಗಳಿಂದ ಕುಡಿವ ನೀರು ಪೂರೈಕೆ ಮಾಡಬೇಕೆಂದು ಹೇಳಿದರು.

ಕುಡಿವ ನೀರಿನ ಯೋಜನೆಗಳಿಗೆ ಮತ್ತು ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕದ ಕೊರತೆ ಕಾಡುತ್ತಿದ್ದರೇ ಕೂಡಲೇ ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಬೇಕೆಂದು ಹೇಳಿದ ಅವರು, ವಿದ್ಯುತ್‌ ನೀಡಲು ಅಧಿಕಾರಿಗಳು ವಿಳಂಬ ಮಾಡಿದರೇ ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದರು.

ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಪೈಪ್‌ಲೈನ್‌ ಮಾಡುವಾಗ ಸಿಸಿ ರಸ್ತೆ ಒಡೆದರೇ ಕೂಡಲೇ ಗುತ್ತಿಗೆದಾರರಿಂದ ಸರಿಪಡಿಸಬೇಕು, ಇಲ್ಲದಿದ್ದರೇ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು, ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ವ್ಯಾಪ್ತಿಯ ರಸ್ತೆ ಒತ್ತುವರಿ ಮತ್ತು ರೈತರು ಹಾಗೂ ಸಾರ್ವಜನಿಕರು ಕಿತ್ತು ಹಾಕಿದರೇ ಅವರ ವಿರುದ್ಧ ಕೇಸ್‌ ದಾಖಲಿಸಬೇಕು, ಜತೆಗೆ ಅದರ ನಿರ್ವಹಣೆಗೆ ಅವರೇ ಹಣ ಭರಿಸಬೇಕಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಯಾ ಗ್ರಾಪಂ ಪಿಡಿಒ ಗಮನ ಹರಿಸಬೇಕೆಂದು ಹೇಳಿದರು.

ತೆರಿಗೆ ವಸೂಲಿ ಶೇ.63 ರಷ್ಟು ಆಗಿದೆ, ಇದು ಇಡೀ ಜಿಲ್ಲೆಯಲ್ಲೇ ಹೂವಿನಹಡಗಲಿ ಕೊನೆ ಸ್ಥಾನದಲ್ಲಿದೆ. ಈ ಕೂಡಲೇ ಪಿಡಿಒ ಅವರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಿ, ಜತೆಗೆ ಅವರಿಗೆ ನೋಟಿಸ್‌ ನೀಡಬೇಕು. ಸರಿಯಾಗಿ ಕೆಲಸ ಮಾಡದಿದ್ದರೇ ಅವರನ್ನು ತೆಗೆದು ಹಾಕಲು ಸೂಚನೆ ನೀಡಿದ್ದಾರೆ.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಸರಿಯಾಗಿ ಕಾಮಗಾರಿ ಮಾಡದ ಗುತ್ತಿಗೆದಾರರ ವಿರುದ್ದ ಕೇಸು ದಾಖಲು ಮಾಡಿ ಜತೆಗೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಛತೆ ಇಲ್ಲ, ಬೂದು ನೀರು ನಿರ್ವಹಣೆ ಕಾಮಗಾರಿ ಮಾಡುತ್ತಿಲ್ಲ, ಈ ಕುರಿತು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಇಲ್ಲದಿದ್ದರೇ ನಿಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.