ಸಾರಾಂಶ
ಕನಕಪುರ: ಪಂಚಾಯತಿಯಲ್ಲಿ ಅನುಷ್ಠಾನ ಮಾಡಿರುವ ಕಾಮಗಾರಿಗಳಲ್ಲಿ ಕೆಲವು ಕಾಮಗಾರಿಗಳನ್ನು ಮುಚ್ಚಿದ್ದು ಕೆಲಸಕ್ಕೆ ಹೋಗುವವರ ಹೆಸರಿಗೆ ಕೂಲಿ ಹಣ ನೀಡಲಾಗಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನೆ ತಾಲೂಕು ಸಂಯೋಜಕಿ ಕಮಲಮ್ಮ ತಿಳಿಸಿದರು.
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾಮಗಾರಿಗಳ ಲೆಕ್ಕಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಎಂಬಿ ಬರೆಯದೆ ಸಾಮಗ್ರಿ ವೆಚ್ಚ ಬಿಡುಗಡೆ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಕಾಮಗಾರಿ ಅನುಷ್ಠಾನ ಆದ ಮೇಲೆ ಕೂಲಿ ಹಣವನ್ನು ಬಿಡುಗಡೆ ಮಾಡಿ ನಂತರ ಇಂಜಿನಿಯರ್ ಸ್ಥಳ ಪರಿಶೀಲಿಸಿ ಕಾಮಗಾರಿ ಯಾವ ಪ್ರಮಾಣದಲ್ಲಿ ನಡೆದಿದೆ ಎಂದು ಎಂಬಿ ಬರೆಯಬೇಕು. ಆನಂತರ ಪಂಚಾಯತಿಯಿಂದ ಹಣ ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿನಲ್ಲಿ 261 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 91 ಲಕ್ಷ ಕೂಲಿ ಮೊತ್ತ, 81.52 ಸಾಮಗ್ರಿ ಮೊತ್ತ ಖರ್ಚು ಮಾಡಲಾಗಿದೆ. 58 ಕಾಮಗಾರಿಗಳಿಗೆ ನಾಮಫಲಕ ಹಾಕಿಲ್ಲ. ಕೆಲವು ಕಾಮಗಾರಿಗಳನ್ನು ನಿರ್ಮಾಣ ಮಾಡಿ ಹಣ ಬಿಡುಗಡೆಯಾದ ನಂತರ ಒಡೆದು ಹಾಕಿದ್ದಾರೆ. ರೇಷ್ಮೆ, ಕೃಷಿ, ಅರಣ್ಯ ಇಲಾಖೆಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಇರುವ ಲೋಪ ದೋಷಗಳನ್ನು ನಿಗದಿತ ಕಾಲಾವಧಿಯಲ್ಲಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಗ್ರಾಮ ಸಭೆಗೆ ಪಶು ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಇಲಾಖಾ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಿಕೊಡಬೇಕು. ಆದರೆ ಪ್ರತಿ ಬಾರಿಯೂ ಸಭೆಗಳಿಗೆ ಕೆಲವು ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವುದೇ ಇಲ್ಲ, ಅವರ ವಿರುದ್ಧ ಹೆಚ್ಚು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಕೃಷ್ಣ ಮಾತನಾಡಿ, ಕೂಲಿ ಹಣ ಪಾವತಿಯಾಗಿರುವ, ಗ್ರಾಮದಿಂದ ಹೊರಗಿರುವವರು ಮತ್ತು ಕೆಲಸಕ್ಕೆ ಹೋಗುವವರಿಗೆ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳುತ್ತೇವೆ. ಕಾಮಗಾರಿಗಳಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಅಚ್ಚಲು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಣುಕಾಂಬ ನೋಡಲ್ ಅಧಿಕಾರಿಯಾಗಿ ಸಭೆ ನಡೆಸಿದರು. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 0,:
ಅಚ್ಚಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಲೆಕ್ಕ ಪರಿಶೋಧನಾ ಸಭೆ ನಡೆಯಿತು.