ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಉಪಹಾರ ನೀಡಲು ಅಧಿಕಾರಿಗಳಿಗೆ ಸೂಚನೆ

| Published : Sep 18 2025, 01:10 AM IST

ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಉಪಹಾರ ನೀಡಲು ಅಧಿಕಾರಿಗಳಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆ. ೧೮ ರಂದು ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಿ ಸೂಚನೆ ನೀಡಲಿದ್ದೇವೆ. ಒಟ್ಟಾರೆ ಸರ್ಕಾರದ ಮಾರ್ಗಸೂಚಿಗಳನ್ವಯ ಸರ್ಕಾರದ ಸೇವೆಗಳು ಜನರಿಗೆ ತಲುಪಬೇಕು. ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ನ್ನು ಜಾರಿಗೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಮಧ್ಯಾಹ್ನದ ಉಪಹಾರ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಣೆಯಾಗುವ ಆಹಾರವನ್ನು ಸರ್ಕಾರ ನಿಗಧಿಪಡಿಸಿರುವ ಮೆನು ಚಾರ್ಟ್ ಪ್ರಕಾರವೇ ನೀಡಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಕಂಡುಬಂದ ಕುಂದು ಕೊರತೆಗಳ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರು ಸೆಪ್ಟೆಂಬರ್ ೧೫ ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳು, ಅಂಗನವಾಡಿಗಳು, ಆಸ್ಪತ್ರೆಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ನ್ಯಾಯಬೆಲೆ ಅಂಗಡಿಗಳು, ಉಗ್ರಾಣಗಳು ಹಾಗೂ ವಿವಿಧ ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿನ ಸರ್ಕಾರಿ ಸೇವೆಗಳ ಬಗ್ಗೆ ಪರಿವೀಕ್ಷಣೆ ಮಾಡಿ ಅಲ್ಲಿನ ಸಮಸ್ಯೆಗಳನ್ನು, ಕುಂದು ಕೊರತೆಗಳನ್ನು ನಿವಾರಣೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆಗಳನ್ನು ನೀಡಿದ್ದೇವೆ. ಅಲ್ಲದೆ ಲಿಖಿತವಾಗಿ ಸೂಚನೆ ನೀಡಲು ಸಹ ಕ್ರಮವಹಿಸಲಾಗಿದೆ. ಸೆ. ೧೮ ರಂದು ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಿ ಸೂಚನೆ ನೀಡಲಿದ್ದೇವೆ. ಒಟ್ಟಾರೆ ಸರ್ಕಾರದ ಮಾರ್ಗಸೂಚಿಗಳನ್ವಯ ಸರ್ಕಾರದ ಸೇವೆಗಳು ಜನರಿಗೆ ತಲುಪಬೇಕು. ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ನ್ನು ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಆಹಾರ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಮೆನು ಚಾರ್ಟ್ ಪ್ರಕಾರ ಆಹಾರ ವಿತರಣೆ ಆಗುತ್ತಿಲ್ಲ. ಯಾವ ತರಕಾರಿ, ಪದಾರ್ಥದ ಬೆಲೆಗಳು ಕಡಿಮೆ ಇರುತ್ತವೋ ಅದಕ್ಕೆ ಪೂರಕವಾಗಿ ಅಡುಗೆ ತಯಾರು ಮಾಡಿ ಆಹಾರ ನೀಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಬಿಸಿ ನೀರಿನ ವ್ಯವಸ್ಥೆ ಇಲ್ಲ, ಊಟದ ಕೋಣೆ ಇಲ್ಲ, ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಿಲ್ಲ, ವಸತಿ ಶಾಲೆಗಳಲ್ಲಿ ಗ್ರಂಥಾಲಯಗಳಿಲ್ಲ, ಈ ಎಲ್ಲ ಸಮಸ್ಯೆಗಳು ನಿವಾರಣೆ ಆಗಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ಜಿಲ್ಲೆಯ ಹಲವಾರು ಉಗ್ರಾಣಗಳಲ್ಲಿ ಆಹಾರ ಸಂಗ್ರಹಣೆ ಪ್ರಮಾಣಕ್ಕೂ, ವಿತರಣೆ ಪ್ರಮಾಣಕ್ಕೂ ವ್ಯತ್ಯಾಸವಿದೆ. ಸಮರ್ಪಕವಾಗಿ ಆವಕ ಮತ್ತು ರವಾನೆಯ ನಿರ್ವಹಣೆ ಇಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಗೌರಿಬಿದನೂರು ತಾಲೂಕಿನ ತೊಂಡಬಾವಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದಾಗ ನಿಗದಿತ ವೇಳೆಯಲ್ಲಿ ಅಂಗಡಿ ತೆರೆಯದಿರುವುದು ಹಾಗೂ ಆಹಾರ ಸಂಗ್ರಹಣೆಗೂ ಹಾಗೂ ಮಾರಾಟಕ್ಕೂ ತಾಳೆಯಾಗುತ್ತಿಲ್ಲ. ಸರಿಪಡಿಸಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ. ಆಯೋಗ ಜಿಲ್ಲೆಯ ಪ್ರವಾಸ ವೇಳೆ ಗಮನಿಸಿರುವ ಎಲ್ಲಾ ಅಂಶಗಳ ಬಗ್ಗೆ ನಾಳಿನ ಸಭೆಯಲ್ಲಿ ಗಮನಸೆಳೆದು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸುವುದಾಗಿ ತಿಳಿಸಿದರು.

ಈ ವೇಳೆ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾಜ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ. ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮೀ, ಸದಸ್ಯ ಕಾರ್ಯದರ್ಶಿ ಸುಜಾತ ಡಿ. ಹೊಸಮನಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ರವರು ಉಪಸ್ಥಿತರಿದ್ದರು.