ಮಳೆ ಕೊರತೆಯಿಂದ ತೀವ್ರ ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಮಳೆ ಕೊರತೆಯಿಂದ ತೀವ್ರ ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕು. ಬೆಳೆ ವಿಮೆ ಮಾಡಿಸುವದರ ಜತೆಗೆ ಸಕಾಲಕ್ಕೆ ಅದು ಅವರಿಗೆ ನೆರವಾಗಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ದೊರೆಯಬೇಕು. ಬಾಕಿ ಪ್ರಕರಣಗಳಲ್ಲಿ ತುರ್ತಾಗಿ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ರೈತರಿಗೆ ಕೃಷಿ ಸಲಕರಣೆಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ರೈತರ ಬೇಡಿಕೆಯ ಕಂಪನಿಯ ಗುಣಮಟ್ಟದ ಸ್ಟ್ರೀಂಕ್ಲರ್, ಇತರೆ ಸಾಧನ, ಸಲಕರಣೆ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೆರವಾಗಿ ನಿಲ್ಲಬೇಕು ಎಂದು ಅವರು ಸೂಚಿಸಿದರು.ತೋಟಗಾರಿಕೆಗೆ ಅವಕಾಶ: ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಪುಲ ಅವಕಾಶಗಳಿದ್ದು, ಇದುವರೆಗೆ ಶೇ 20ರಷ್ಟು ನೀರಾವರಿ ಪ್ರದೇಶದಲ್ಲಿ ಅಭಿವೃದ್ಧಿ ಹೊಂದಬೇಕಿತ್ತು. ಜಿಲ್ಲೆಯಲ್ಲಿ ಶೇ.3ರಷ್ಟು ಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಪ್ರದೇಶ ಅಭಿವೃದ್ಧಿ ಹೊಂದಿರುವುದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಾಲೋಚನೆಯ ಯೋಜನೆ ರೂಪಿಸಬೇಕು. ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸ್ತಾವನೆಗೆ ಅನುಮೋದನೆ ಪಡೆದು ನಿಗದಿತ ಸಮಯದೊಳಗೆ ಗುರಿ ಸಾಧನೆಗೆ ಯೋಜನೆ ರೂಪಿಸಬೇಕು ಎಂದು ಸಚಿವ ಡಾ.ಶರಣ್‌ಪ್ರಕಾಶ್ ಪಾಟೀಲ್ ಸೂಚಿಸಿದರು.
ರೇಷ್ಮೆ ಇಲಾಖೆಯಿಂದ ನಿಗದಿತ ಗುರಿ ಸಾಧಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿ ಪಶು ಸಂಗೋಪನಾ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಿ ಸಮರ್ಪಕ ಮೇವು ಇರುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿ ಹಾಗೂ ವಾಹನಗಳ ಬೇಡಿಕೆ ಪ್ರಸ್ತಾವನೆ ಕೇಂದ್ರ ಕಚೇರಿಗೆ ಕಳುಹಿಸಬೇಕು ಎಂದರು.2024 ರಿಂದ ಬಾಕಿ ಶಾಲಾ ಕೊಠಡಿ ನಿರ್ಮಾಣ, ಕೊಠಡಿ ದುರಸ್ತಿ , ಶೌಚಾಲಯ ನಿರ್ಮಾಣ, ಅಂದಾಜು ಪತ್ರಿಕೆ ತಕ್ಷಣ ತಯಾರಿಸಬೇಕು. ಬಾಕಿ ಶಾಲಾ ಕೊಠಡಿ ನಿರ್ಮಾಣ ಹಾಗೂ ದುರಸ್ತಿ ಕಾರ್ಯ, ಶೌಚಾಲಯ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
*ಗರ್ಭಿಣಿಯರ ಟ್ಯ್ರಾಕಿಂಗ್: ಜಿಲ್ಲೆಯ ಎಲ್ಲ ಗರ್ಭಿಣಿಯರ ಟ್ರ್ಯಾಕಿಂಗ್ ವ್ಯವಸ್ಥೆ ಸರಿಯಾಗಿದ್ದು, ನೋಂದಣಿ ಸರಿಯಾಗಿರಬೇಕು. ಡೇಟಾ ಎಂಟ್ರಿ ಸರಿಯಾಗಿ ಮಾಡಬೇಕು. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಾಯ್ದೆಯನ್ವಯ ಕ್ಲೋಸ್ ಗೆ ಕ್ರಮ ಕೈಗೊಳ್ಳುವ ಜೊತೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಕಲಿ ವೈದ್ಯರ ಮೇಲೆಯೂ ಸೂಕ್ತ ನಿಗಾ ಇಡಬೇಕು ಎಂದು ಸಚಿವರು ಸೂಚಿಸಿದರು.ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ್, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸಹಿತ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಸೆಂಬರ್‌ನೊಳಗೆ ಕಾಮಗಾರಿ ಮುಗಿಸಿ: ಜಲಜೀವನ್ ಮಿಷನ್ ಯೋಜನೆಯಡಿಯ ಗುಣಮಟ್ಟದ ಕಾಮಗಾರಿಗಳನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸಬೇಕು. ಜಲಧಾರೆ ಯೋಜನೆಯಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ತಾಲೂಕುವಾರು ಕಾಮಗಾರಿ ಪೂರ್ಣಗೊಂಡ ಬಗ್ಗೆ ಆಯಾ ಶಾಸಕರಿಗೆ ಪಟ್ಟಿ ನೀಡಬೇಕು. ಅರಣ್ಯ ಇಲಾಖೆ ವ್ಯಾಪ್ತಿಯ ಕಾಮಗಾರಿಗಳಿಗೆ ಸಂಬಂಧಿಸಿ ನಿರಪೇಕ್ಷಣಾ ಪತ್ರ ಪಡೆದು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ರೈಲ್ವೆ, ಹೈವೆ ವ್ಯಾಪ್ತಿಯಲ್ಲಿಯೂ ವಿಶೇಷ ಗಮನ ನೀಡಬೇಕು ಎಂದರು. ದೊಡ್ಡ ಪ್ರಮಾಣದ ಯೋಜನೆ ಇದಾಗಿರುವುದರಿಂದ ಅಡೆತಡೆಗಳನ್ನು ನಿವಾರಣೆಗೆ ವಿಶೇಷ ಗಮನ ನೀಡಿ ಮುಂದಿನ ಮಾರ್ಚ್‌ನೊಳಗೆ ಈ ಯೋಜನೆ ಕಮಿಷನಿಂಗ್ ಆಗಿ ಕಾರ್ಯಾರಂಭಗೊಳ್ಳಬೇಕು. ಸೂಕ್ತ ಪ್ರಗತಿ ಸಾಧಿಸದಿದ್ದಲ್ಲಿ ದಂಡ ಸಹ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.